ಎಸ್ಪಿ ಬಾಲಸುಬ್ರಮಣ್ಯಂ ಅವರು ಗಾಯನದ ಜೊತೆಗೆ ನಟನೆಯಲ್ಲೂ ಹೆಚ್ಚು ಆಸಕ್ತಿ ತೋರಿದ್ದರು. ಎಸ್ಪಿಬಿ ಅವರು ವಿವಿಧ ಭಾಷೆಯ 72 ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.
ಭಾರತ ಚಿತ್ರರಂಗದಲ್ಲಿ ಈ ಪರಿ ಸಿನಿಮಾದಲ್ಲಿ ನಟಿಸಿದ ಮತ್ತೊಬ್ಬ ಗಾಯಕರು ಇಲ್ಲ. ಎಸ್ಪಿಬಿ ಅವರ ಮಾತೃಭಾಷೆ ತೆಲುಗು ಆಗಿದ್ದರೂ ಕನ್ನಡ, ತಮಿಳು, ಇಂಗ್ಲಿಷ್, ಹಿಂದಿಯನ್ನು ಸ್ಪಷ್ಟವಾಗಿ ಮಾತನಾಡುತ್ತಿದ್ದರು. ನಟನೆಯ ಜೊತೆಗೆ ಕಂಠದಾನ ಕಲಾವಿದರಾಗಿಯೂ ಎಸ್ಪಿಬಿ ಅವರು ಗುರುತಿಸಿಕೊಂಡಿದ್ದಾರೆ.
ರಜನಿಕಾಂತ್, ಕಮಲ್ ಹಾಸನ್, ಸಲ್ಮಾನ್ ಖಾನ್, ಭಾಗ್ಯರಾಜ್, ಜೆಮಿನಿ ಗಣೇಶನ್, ನಾಗೇಶ್, ಕಾರ್ತಿಕ್, ರಘುವರನ್, ವಿನೋದ್ ಕುಮಾರ್ ಮೊದಲಾದವರಿಗೆ ಧ್ವನಿ ನೀಡಿದ್ದಾರೆ.
ಕಮಲ್ ಹಾಸನ್ ಅವರಿಗೆ ಒಂದು ಕಾಲದಲ್ಲಿ ಅನ್ವರ್ಥ ಕಂಠದಾನಿಯಾಗಿದ್ದರು. ತಮಿಳಿನಿಂದ ತೆಲುಗಿಗೆ ಡಬ್ ಆಗುತ್ತಿದ್ದ ಕಮಲ್ ಹಾಸನ್ ಸಿನಿಮಾಗಳಿಗೆ ಎಸ್ಪಿಬಿ ಬಿಟ್ಟರೆ ಇನ್ಯಾರೂ ಧ್ವನಿ ನೀಡಿಲ್ಲ. ತೆಲುಗಿಗೆ ಡಬ್ ಆಗಿದ್ದ ಕಮಲ್ ಅವರ ದಶಾವತಾರಂ ಸಿನಿಮಾದಲ್ಲಿ ಕಮಲ್ ಹಾಸನ್ ಅವರ ಅಜ್ಜಿ ಪಾತ್ರ ಸೇರಿ ಏಳು ಪಾತ್ರಗಳಿಗೂ ಎಸ್ಪಿಬಿ ಕಂಠದಾನ ಮಾಡಿದ್ದರು.