ರೆಬಲ್ ಸ್ಟಾರ್ ಅಂಬರೀಶ್ ಅವರ ಮೊದಲ ವರ್ಷದ ಪುಣ್ಯತಿಥಿಯನ್ನು ಕುಟುಂಬ ವರ್ಗ ಇಂದು ಬೆಂಗಳೂರಿನ ಅರಮನೆ ಆವರಣದ ಗಾಯತ್ರಿ ವಿಹಾರ್ನಲ್ಲಿ ಆಚರಿಸಿದೆ. ನವೆಂಬರ್ 24 ರಂದು ಅಂಬರೀಶ್ ನಿಧನರಾದ ದಿನವಾದರೂ ಪಂಚಾಂಗದ ಪ್ರಕಾರ ಇಂದು ಒಳ್ಳೆಯ ದಿನವಾದ್ದರಿಂದ ಈ ದಿನವೇ ಪುಣ್ಯತಿಥಿ ಆಚರಿಸಲಾಗಿದೆ.
ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿದ್ದ ಅಂಬರೀಶ್ ಭಾವಚಿತ್ರಕ್ಕೆ ಪತ್ನಿ ಸುಮಲತಾ ಅಂಬರೀಶ್, ಮಗ ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಟ ದೊಡ್ಡಣ್ಣ ನಮನ ಸಲ್ಲಿಸಿದ್ರು. ಇಂದು ಬಿಜೆಪಿಗೆ ಸೇರ್ಪಡೆಯಾದ ಸುಧಾಕರ್, ಕಾಂಗ್ರೆಸ್ ಮುಖಂಡ ಕೆ.ಜೆ. ಜಾರ್ಜ್, ನಿರ್ದೇಶಕ ನಾಗಣ್ಣ, ಭಾರತಿ ವಿಷ್ಣುವರ್ಧನ್, ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸೇರಿದಂತೆ ಅಂಬರೀಶ್ ಸಂಬಂಧಿಕರು, ಸ್ನೇಹಿತರು ನಮನ ಸಲ್ಲಿಸಿದರು.
ನಂತರ ಮಾತನಾಡಿದ ರಾಕ್ಲೈನ್ ವೆಂಕಟೇಶ್, ಅಂಬರೀಶ್ ಸ್ಮಾರಕದ ವಿಷಯವಾಗಿ ಚಿತ್ರರಂಗದಿಂದ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ಕೂಡಾ ಸ್ಪಂದಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅಂಬರೀಶ್ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ, ಆ ಟ್ರಸ್ಟ್ ಮುಖಾಂತರ ಸ್ಮಾರಕದ ಕೆಲಸಗಳನ್ನು ಆರಂಭಿಸಲಿದ್ದೇವೆ. ಈ ಟ್ರಸ್ಟ್ಗೆ ಅಧ್ಯಕ್ಷರಾಗಿ ಮುಖ್ಯಮಂತ್ರಿ, ಅಂಬರೀಶ್ ಕುಟುಂಬಸ್ಥರು ಹಾಗೂ ಕಲಾವಿದರ ಸಂಘದವರು ಇರಲಿದ್ದಾರೆ. ಈ ಟ್ರಸ್ಟ್ ಸ್ಥಾಪನೆಯಾದ ಮೇಲೆ ಮುಂದಿನ ವರ್ಷ ಅಂಬರೀಶ್ ಸ್ಮಾರಕಕ್ಕೆ ಚಾಲನೆ ದೊರೆಯಲಿದೆ. ಇನ್ನು ನವೆಂಬರ್ 24ರಂದು ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿರುವ ಸ್ಕ್ರೀನಿಂಗ್ ಥಿಯೇಟರ್ಗೆ 'ಡಾ. ಅಂಬರೀಶ್ ಆಡಿಟೋರಿಯಂ' ಎಂದು ಹೆಸರು ಇಡಲಾಗುವುದು ಎಂದು ರಾಕ್ಲೈನ್ ವೆಂಕಟೇಶ್ ತಿಳಿಸಿದರು.