ವಿದೇಶದಲ್ಲಿ ವಾಸವಿರುವ ಎನ್ಆರ್ಐ ಕನ್ನಡಿಗರಲ್ಲಿ ನಟ, ನಿರ್ದೇಶಕ ರಿಷಭ್ ಶೆಟ್ಟಿ ಕ್ಷಮೆ ಕೇಳಿದ್ದಾರೆ. ಹೌದು, ರಿಷಬ್ ಶೆಟ್ಟಿ ನಟಿಸಿ ನಿರ್ಮಾಣ ಮಾಡಿರುವ ಪ್ರಯೋಗಾತ್ಮಕ ಚಿತ್ರ "ಕಥಾಸಂಗಮ" ಡಿಸೆಂಬರ್ 6ರಂದು ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಅದರೆ ಕಥಾಸಂಗಮ ಚಿತ್ರವನ್ನು ವಿದೇಶದಲ್ಲಿ ಬಿಡುಗಡೆ ಮಾಡದಿರಲು ತಿರ್ಮಾನಿಸಿದ್ದಾರೆ.
ವಿದೇಶಗಳಲ್ಲಿ ಕನ್ನಡ ಸಿನಿಮಾಗಳನ್ನು ಬಿಡುಗಡೆ ಮಾಡಿದ್ರೆ ಚಿತ್ರದ ನಿರ್ಮಾಪಕರಿಗೆ ಏನೂ ಲಾಭವಿಲ್ಲ. ಬದಲಿಗೆ ನಮ್ಮ ಚಿತ್ರಗಳನ್ನು ವಿದೇಶದಲ್ಲಿ ರಿಲೀಸ್ ಮಾಡುವ ವಿತರಕರಿಗೆ ಉಪಯೋಗ ಜಾಸ್ತಿ ಎಂದು ಕನ್ನಡ ಚಿತ್ರಗಳನ್ನು ವಿದೇಶಗಳಲ್ಲಿ ರಿಲೀಸ್ ಮಾಡುವ ಕೆಲವು ವಿತರಕರ ವಿರುದ್ಧ ರಿಷಭ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಥಾಸಂಗಮ ಚಿತ್ರದ ರಿಲೀಸ್ ಪ್ರೆಸ್ಮೀಟ್ನಲ್ಲಿ ಮಾತನಾಡಿದ ರಿಷಭ್ ಈ ವಿಷ್ಯವನ್ನು ಮಾಧ್ಯಮಗಳ ಜೊತೆ ಹಂಚಿಕೊಂಡರು. ವಿದೇಶಗಳಲ್ಲಿ ಉತ್ತಮ ಪ್ರದರ್ಶನ ಕಾಣುವ ಕನ್ನಡ ಚಿತ್ರಗಳು ಕೋಟ್ಯಂತರ ರೂಪಾಯಿ ಗಳಿಸುತ್ತವೆ. ಅದರೆ ನಮ್ಮ ಚಿತ್ರಗಳನ್ನು ಓವರ್ಸೀಸ್ನಲ್ಲಿ ರಿಲೀಸ್ ಮಾಡುವ ವಿತರಕರು ನಮಗೆ ಕಳ್ಳ ಲೆಕ್ಕ ಕೊಟ್ಟು ಪುಡಿಗಾಸನ್ನು ನಮಗೆ ಕೊಡುತ್ತಾರೆ.
ಅಲ್ಲದೆ ಅವರನ್ನು ಬಿಟ್ಟು ನಮ್ಮ ಚಿತ್ರಗಳನ್ನು ವಿದೇಶದಲ್ಲಿ ರಿಲೀಸ್ ಮಾಡಲು ಕೊಡದೆ ಹೋದರೆ ನಮ್ಮ ಚಿತ್ರವನ್ನು ಡಿ ಪ್ರಮೋಟ್ ಮಾಡಿ ಪ್ರೇಕ್ಷಕರಿಗೆ ತಲುಪದ ಹಾಗೆ ಮಾಡ್ತಾರೆ. ವಿದೇಶದಲ್ಲಿ ವಿಶೇಷ ಪ್ರದರ್ಶನ ಏರ್ಪಡಿಸಿ ದುಬಾರಿ ಟಿಕೆಟ್ ದರ ವಸೂಲಿ ಮಾಡಿ ಪ್ರೇಕ್ಷಕರಿಗೂ ಬರೆ ಹಾಕ್ತಾರೆ. ಅಲ್ಲದೆ ನಿರ್ಮಾಪಕರಿಗೆ ಕಾಗಕ್ಕ ಗೂಬಕ್ಕನ ಲೆಕ್ಕ ತೋರಿಸಿ ನಮಗೆ ಚಿಲ್ಲರೆ ಕಾಸು ಕೊಡ್ತಾರೆ. ಹಾಗಾಗಿ ಕಥಾಸಂಗಮ ಚಿತ್ರವನ್ನು ರಿಲೀಸ್ ಮಾಡೋದೇ ಬೇಡ. ಅದರ ಬದಲಾಗಿ ನಮ್ಮ ರಾಜ್ಯದಲ್ಲೇ ಒಳ್ಳೆ ಪ್ರಮೋಷನ್ ಮಾಡಿ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪುವಂತೆ ಮಾಡಬೇಕಿದೆ. ಹಾಗಾಗಿ ಈ ಚಿತ್ರ ವಿದೇಶದಲ್ಲಿ ಬಿಡಿಗಡೆಯಾಗುವುದು ಡೌಟ್. ಈ ಚಿತ್ರಕ್ಕಾಗಿ ಕಾಯ್ತಿದ್ದ ಎನ್ಆರ್ಐ ಕನ್ನಡಿಗರಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದು ರಿಷಭ್ ವಿದೇಶದಲ್ಲಿರುವ ಕನ್ನಡಿಗರಲ್ಲಿ ಕ್ಷಮೆ ಕೇಳಿದ್ರು.
ಇನ್ನು ರಿಷಭ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರುವ ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ, ಬೆಲ್ ಬಾಟಮ್ ಚಿತ್ರಗಳು ವಿದೇಶದಲ್ಲಿ ಉತ್ತಮ ಪ್ರದರ್ಶನ ಕಂಡಿದ್ದವು. ಅಲ್ಲದೆ ಈಗ ಕಥಾಸಂಗಮ ಚಿತ್ರಕ್ಕೂ ಕಾಯ್ತಿದ್ದ ಎನ್ಆರ್ಐ ಕನ್ನಡಿಗರಿಗೆ ಕಥಾ ಸಂಗಮ ಚಿತ್ರತಂಡ ನಿರಾಸೆ ಮೂಡಿಸಿದೆ.