ಬೆಂಗಳೂರು ಮಾಗಡಿ ರಸ್ತೆಯ ಮೆಟ್ರೋ ಸ್ಟೇಷನ್ಗೆ ವರನಟ ಡಾ. ರಾಜ್ಕುಮಾರ್ ಹೆಸರಿಡುವಂತೆ ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ಬಿಬಿಎಂಪಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
1984 ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು ಕೇಂದ್ರಾಡಳಿತ ಪ್ರದೇಶವಾಗುವುದನ್ನು ಡಾ. ರಾಜ್ಕುಮಾರ್ ಅವರು ತಡೆದಿದ್ದರು. ಅಣ್ಣಾವ್ರ ಒಂದು ಮಾತಿನಿಂದ ಅಂದಿನ ಸರ್ಕಾರ ಆ ನಿರ್ಧಾರದಿಂದ ಹಿಂದೆ ಸರಿದಿತ್ತು. ಅಲ್ಲದೆ ಕನ್ನಡ ನಾಡು,ನುಡಿ, ಸಂಸ್ಕೃತಿಗೆ ಅಣ್ಣಾವ್ರ ಕೊಡುಗೆ ಅಪಾರವಾಗಿದೆ. ಇಂದು ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆ ಆಗಿದೆ ಎಂದರೆ ಅದಕ್ಕೆ ಅಣ್ಣಾವ್ರ ನೇತೃತ್ವದಲ್ಲಿ ನಡೆದ ಗೋಕಾಕ್ ಚಳುವಳಿಯೇ ಕಾರಣ. ಯಾವುದೇ ಪ್ರತಿಫಲ ಅಪೇಕ್ಷಿಸದೆ ಅಣ್ಣಾವ್ರು ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಅದನ್ನು ಯಶಸ್ವಿಗೊಳಿಸಿದ್ದರು.
ಕನ್ನಡ ಎಂದರೆ ನಮ್ಮ ಕಣ್ಣ ಮುಂದೆ ಬರುವುದು ನಟಸಾರ್ವಭೌಮ ಡಾ. ರಾಜ್ಕುಮಾರ್. ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ಮಾಜಿ ಪದಾಧಿಕಾರಿಯಾಗಿ, ಕರ್ನಾಟಕ ಕೇಸರಿ ಡಾ. ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷನಾಗಿ ನಾನು ಬಿಬಿಎಂಪಿಗೆ ಪತ್ರ ಬರೆದು ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಡಾ. ರಾಜ್ಕುಮಾರ್ ಹೆಸರಿಡುವಂತೆ ಮನವಿ ಮಾಡಿದ್ದೇನೆ ಎಂದು ಎನ್.ಆರ್. ರಮೇಶ್ ಹೇಳಿದ್ದಾರೆ.