ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ರೆಬಲ್ ಸ್ಟಾರ್ ಆಗಿ ಮೆರೆದ ದಿವಂಗತ ನಟ ಅಂಬರೀಶ್ ಇರುವಷ್ಟು ದಿನ ಐಶಾರಾಮಿ ಜೀವನ ಸಾಗಿಸಿದವರು. ಅವರಿಗೆ ಕಾರು ಹಾಗು ಶ್ವಾನಗಳು ಅಂದ್ರೆ ಪಂಚಪ್ರಾಣವಾಗಿತ್ತು. ಇದೀಗ ಅಂಬರೀಶ್ ಅವರ ಅಚ್ಚುಮೆಚ್ಚಿನ ಶ್ವಾನ 'ಕನ್ವರ್' ಉಸಿರು ನಿಲ್ಲಿಸಿದೆ.
ಅಂಬರೀಶ್ ಬದುಕಿದ್ದಾಗ ಪ್ರತಿದಿನವೂ ಈ ಕನ್ವರ್ ಜೊತೆ ಸಮಯ ಕಳೆಯುತ್ತಿದ್ದರು. ಪ್ರಾಣಿಪ್ರಿಯರಾಗಿದ್ದ ಅಂಬಿ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕನ್ವರ್ ಜೊತೆಗೆ ಬುಲ್ ಬುಲ್ ಎಂಬ ಮತ್ತೊಂದು ಶ್ವಾನ ಇದೆ. ಈ ಎರಡು ಶ್ವಾನಗಳನ್ನು ಅಂಬಿ ಬಹಳ ಇಷ್ಟಪಟ್ಟು ಸಾಕಿದ್ದರು. ಆದ್ರೀಗ, ತನ್ನ ಯಜಮಾನನಿಲ್ಲದ ಮನೆಯನ್ನು ಬಿಟ್ಟು ತಾನು ಇಹಲೋಕ ತ್ಯಜಿಸಿದೆ.
ಸೇಂಟ್ ಬರ್ನಾಡ್ ತಳಿಯ ಶ್ವಾನಗಳಾದ ಕನ್ವರ್ ಮತ್ತು ಬುಲ್ ಬುಲ್ ಅಂಬಿ ಮನೆಯ ಸದಸ್ಯರಂತೆ ಇದ್ದವು. ಅಂಬಿ ಮಗ ಅಭಿಷೇಕ್‌ಗೂ ಈ ಶ್ವಾನಗಳಂದ್ರೆ ಬಹಳ ಅಚ್ಚುಮೆಚ್ಚು. ಅದರಲ್ಲೂ ಕನ್ವರ್ ಅಂದ್ರೆ ಸ್ವಲ್ಪ ಆತ್ಮೀಯತೆ ಹೆಚ್ಚಿತ್ತು. ಅಂಬಿ ವಾಕಿಂಗ್ ಹೋದಾಗ ಕನ್ವರ್‌ನನ್ನು ಸಹ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಅಂಬಿ ಮನೆಯಲ್ಲಿದ್ದಾಗಲೂ ಹೇ ಕನ್ವರ್ ಎಂದು ಕರೆದ ತಕ್ಷಣ ಅದು ಅಂಬರೀಶ್ ಮೇಲೆ ಕುಳಿತುಕೊಳ್ಳುತ್ತಿತ್ತು.
ನಾಗರಹಾವು ಚಿತ್ರದಲ್ಲಿ ಜಲೀಲನ ಪಾತ್ರ ನಿಭಾಯಿಸಿದ್ದ ಅಂಬರೀಶ್‌ಗೆ ಬುಲ್ ಬುಲ್ ಮಾತಾಡಕ್ಕಿಲ್ವಾ. ಡೈಲಾಗ್ ಬಹಳ ಖ್ಯಾತಿ ತಂದು ಕೊಟ್ಟಿತ್ತು. 'ಅಂತ' ಚಿತ್ರದ ಕನ್ವರ್ ಲಾಲ್ ಹೆಸರು ಸಹ ಹಾಗೂ ಕುತ್ತೇ...ಕನ್ವರ್ ನಹೀ ಕನ್ವರ್ ಲಾಲ್ ಬೋಲೋ' ಡೈಲಾಗ್ ಅಷ್ಟೇ ಯಶಸ್ಸು ತಂದುಕೊಟ್ಟಿತ್ತು. ಹಾಗಾಗಿ, ಈ ನೆನಪಿಗಾಗಿ ತಮ್ಮ ಮನೆಯಲ್ಲಿದ್ದ ಶ್ವಾನಗಳಿಗೆ ಅಂಬರೀಶ್ ಆ ಹೆಸರನ್ನಿಟ್ಟಿದ್ದರು.
ಅಂಬರೀಶ್ ನಿಧನರಾದ ಬಳಿಕ ಕನ್ವರ್ ಮಾನಸಿಕವಾಗಿ ನೊಂದಿತ್ತು. ಸರಿಯಾಗಿ ಊಟ ಸಹ ಮಾಡುತ್ತಿರಲಿಲ್ಲ, ಯಾರ ಬಳಿಯೂ ಸೇರುತ್ತಿರಲಿಲ್ಲ, ಒಬ್ಬಂಟಿಯಾಗಿ ಇರುತ್ತಿತ್ತು. ಇದೀಗ, ಅಂಬಿ ನಿಧನದ ಎರಡೂವರೆ ವರ್ಷದ ಬಳಿಕ ಕನ್ವರ್ ಸಹ ಕೊನೆಯುಸಿರೆಳೆದಿದೆ. ಇದು ಸುಮಲತಾ ಅಂಬರೀಶ್ ಹಾಗು ಅಭಿಷೇಕ್ ಅಂಬರೀಶ್ ಗೆ ತುಂಬಾ ನೋವುಂಟು ಮಾಡಿದೆ.