ಹುಬ್ಬಳ್ಳಿ: ಕೊರೊನಾ ಲಾಕ್ಡೌನ್ ಸಮಯದಲ್ಲಿ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ವಿದೇಶದಲ್ಲಿರುವ ತಮ್ಮ ಅಭಿಮಾನಿಗಳೊಂದಿಗೆ ಆನ್ಲೈನ್ ಸಂವಾದ ನಡೆಸಿದ್ದರು. ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡಾ ಜೂಮ್ ವೇದಿಕೆ ಮುಖಾಂತರ ಸಂವಾದ ನಡೆಸಿದ್ದಾರೆ.
ಲಂಡನ್ನಲ್ಲಿ ನೆಲೆಸಿರುವ ಉತ್ತರ ಕರ್ನಾಟಕ ಭಾಗದವರಾದ ಕೌನ್ಸಿಲರ್ ರಾಜೀವ ಮೈತ್ರಿ, ಐರ್ಲೆಂಡ್ನಲ್ಲಿ ನೆಲೆಸಿರುವ ಈಶ್ವರ್ ಶೆಗುಣಸಿ ಸೇರಿ ಸ್ಥಾಪಿಸಿರುವ ಅನಿವಾಸಿ ಭಾರತೀಯ ಕನ್ನಡ ಸಂಘ, ಅನೇಕ ಆನ್ಲೈನ್ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಈ ಬಾರಿ ರವಿಚಂದ್ರನ್ ಭಾಗವಹಿಸಿ ಸುಮಾರು 1 ಗಂಟೆಗಳ ಕಾಲ ಅಭಿಮಾನಿಗಳೊಂದಿಗೆ ಮಾತುಕತೆ ನಡೆಸಿದರು. ಸುಮಾರು 25 ದೇಶಗಳ ಕನ್ನಡಿಗರನ್ನು ಉದ್ದೇಶಿಸಿ ಚಿತ್ರರಂಗದ ಅನೇಕ ವಿಚಾರಗಳ ಬಗ್ಗೆ ಚರ್ಚಿಸಿದರು. ಪ್ರೇಮಲೊಕ, ಪುಟ್ನಂಜ ಸೇರಿದಂತೆ ತಮ್ಮ ಚಿತ್ರಗಳ ಬಗ್ಗೆ ಮಾತನಾಡಿದರು.
ವಿದೇಶಕ್ಕೆ ಬಂದಾಗ ಖಂಡಿತ ನಿಮ್ಮನ್ನು ಭೇಟಿ ಆಗುತ್ತೇನೆ. ನಿಮ್ಮ ಮನೆಗಳಲ್ಲಿ ಒಂದು ದಿನ ಇದ್ದು ಹೋಗುತ್ತೇನೆ ಎಂದು ಹೇಳಿದರು. ಇಂಗ್ಲೆಂಡ್, ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದುಬೈ, ಕತಾರ್, ಸೌದಿ ಅರೇಬಿಯಾ, ಒಮನ್, ಕುವೈತ್, ಆಫ್ರಿಕಾ, ಐರ್ಲೆಂಡ್ ಕೆನಡಾ, ಯೂರೋಪ್ ಸೇರಿದಂತೆ ಸುಮಾರು 25 ದೇಶಗಳ ಕನ್ನಡ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿ ಶನಿವಾರ ಹಾಗೂ ಭಾನುವಾರ ಒಂದೊಂದು ಕ್ಷೇತ್ರದ ಸೆಲಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂವಾದ ನಡೆಸುತ್ತಿದ್ದಾರೆ. ಕಳೆದ ಒಂದು ತಿಂಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಗಣ್ಯರಾದ ಮುಖ್ಯಮಂತ್ರಿ ಚಂದ್ರು, ಸಾಯಿಕುಮಾರ್, ದೇವರಾಜ್, ವಿಜಯ್ ರಾಘವೇಂದ್ರ, ಪ್ರಜ್ವಲ್ ದೇವರಾಜ್, ರಾಜು ತಾಳಿಕೋಟೆ, ಮುಂತಾದವರು ಭಾಗವಹಿಸಿ ಚಿತ್ರರಂಗದ ಅನುಭವ ಹಂಚಿಕೊಂಡಿದ್ದಾರೆ.