‘ಶುಗರ್ ಫ್ಯಾಕ್ಟರಿ’, ‘ಲವ್ ಮಿ ಆರ್ ಹೇಟ್ ಮಿ’, ಲವ್ ಮಾಕ್ಟೈಲ್-2 ಸೇರಿ ಹೀಗೆ ಬ್ಯಾಕ್ ಟೂ ಬ್ಯಾಕ್ ಚಿತ್ರಗಳನ್ನ ಮಾಡುತ್ತಿದ್ದಾರೆ. ಇದರ ಜೊತೆಗೆ ಡಾರ್ಲಿಂಗ್ ಕೃಷ್ಣ ‘ದಿಲ್ ಪಸಂದ್’ ಎಂಬ ಹೊಸ ಸಿನಿಮಾ ಅನೌನ್ಸ್ ಆಗಿದೆ. ಈ ಚಿತ್ರದ ಟೈಟಲ್ ಅನ್ನ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಅನಾವರಣ ಮಾಡಿದ್ದಾರೆ.
ಬಳಿಕ ಮಾತನಾಡಿದ ರವಿ ಡಿ ಚನ್ನಣ್ಣನವರ್, ನನ್ನ 13 ವರ್ಷದ ವೃತ್ತಿ ಜೀವನದಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಆದರೆ, ನಾನು ಭಾಗವಹಿಸಿರುವ ಮೊದಲ ಚಲನಚಿತ್ರ ಸಮಾರಂಭವಿದು. ಅದಕ್ಕೆ ಕಾರಣ ನನ್ನ ಸುಮಂತ್ ಕ್ರಾಂತಿ ಅವರ ಗೆಳೆತನ ಎಂದರು.
ನಾನು ಅಪ್ಟಟ್ಟ ಕನ್ನಡಾಭಿಮಾನಿ. ‘ವಿಆರ್ ಜೋಕರ್ಸ್’ ಎಂಬ ನಾಟಕವನ್ನು ಬರೆದು, ನಿರ್ದೇಶನ ಮಾಡಿ, ಅಭಿನಯಿಸಿದ್ದೆ. ಅದು ಈಗಲೂ ಯೂಟ್ಯೂಬ್ನಲ್ಲಿ ಲಭ್ಯವಿದೆ. ಅದಕ್ಕೆ ಕೆಲವು ಪ್ರಶಸ್ತಿಗಳು ಬಂದಿವೆ. ನನಗೆ ಬರವಣಿಗೆ ಇಷ್ಟ. ಪಿಯುಸಿಯಲ್ಲಿದ್ದಾಗ ಗದಗ್ನಲ್ಲಿ ಬ್ಲಾಕ್ ಟಿಕೆಟ್ ಮಾರಿದ್ದೆ ಎಂದರು.
ಬಳಿಕ ಮಾತನಾಡಿದ ನಿರ್ದೇಶಕ ಶಿವತೇಜಸ್, ಇದು ಲಾಕ್ಡೌನ್ ಸಮಯದಲ್ಲಿ ಹುಟ್ಟಿದ ಕಥೆ. ಈ ಕಥೆ ಸಿದ್ದವಾದ ಕೂಡಲೇ ನಾಯಕ ಕೃಷ್ಣ ಅವರಿಗೆ ಹೇಳಿದೆ. ಈ ಸಂದರ್ಭಕ್ಕೆ ಸೂಕ್ತವಾದ ಕಥೆ, ಮುಂದುವರೆಯಿರಿ ಎಂದು ನನಗೆ ಹೇಳಿದ್ದರು. ಬಳಿಕ ಕಥೆ ಸಂಪೂರ್ಣವಾಯಿತು ಎಂದರು.
ಬಳಿಕ ಮಾತನಾಡಿದ ನಟ ಡಾರ್ಲಿಂಗ್ ಕೃಷ್ಣ, ಈ ಕಾರ್ಯಕ್ರಮಕ್ಕೆ ರವಿ ಸರ್ ಬಂದಿರುವುದು ನನಗೆ ಹೆಚ್ಚು ಖುಷಿ. ನನಗೆ ಮೊದಲಿನಿಂದಲೂ ಪೊಲೀಸ್ ಅಧಿಕಾರಿಗಳು ಅಂದರೆ ಇಷ್ಟ. ಯಾಕೆಂದರೆ, ನನ್ನ ತಂದೆ ಕೂಡ ಪೊಲೀಸ್ ಅಧಿಕಾರಿಯಾಗಿದ್ದರು ಎಂದು ನೆನಪಿಸಿಕೊಂಡರು.
ನಂತರ ಚಿತ್ರದ ನಾಯಕಿ ನಿಶ್ವಿಕನಾಯ್ಡು ಮಾತನಾಡಿ, ‘ದಿಲ್ ಪಸಂದ್’ ಈ ಹೆಸರೇ ಆಕರ್ಷಣೀಯವಾಗಿದೆ. ನಾನು ಈವರೆಗೂ ನಟಿಸಿರುವ ಚಿತ್ರಗಳಲ್ಲಿ ಒಂದೆಳೆ ಲವ್ ಸ್ಟೋರಿ ಇರುತ್ತಿತ್ತು. ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದ ಪ್ರೇಮಕಥೆಯುಳ್ಳ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಒಳ್ಳೆಯ ತಂಡದೊಂದಿಗೆ ನಟಿಸಲು ಅವಕಾಶ ನೀಡಿರುವ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಧನ್ಯವಾದ ಎಂದರು.
ಸಿನಿಮಾದಲ್ಲಿ ರಂಗಾಯಣ ರಘು, ಸಾಧುಕೋಕಿಲ, ತಬಲಾ ನಾಣಿ, ಗಿರಿ ಮತ್ತು ಅರುಣ ಬಾಲರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತದೊಂದಿಗೆ, ದಿಲ್‌ಪಸಂದ್ ಸಿನಿಮಾಗೆ ಶೇಖರ್ ಚಂದ್ರ ಛಾಯಾಗ್ರಹಣ ಮಾಡಿದ್ದಾರೆ.
ಇದನ್ನೂ ಓದಿ: ಅಣ್ಣಾವ್ರ 'ಮಯೂರ' ಕಲಿಸಿದ ಸ್ವಾಭಿಮಾನ.. ಸಿನಿಮಾ ಬ್ಲಾಕ್ ಟಿಕೆಟ್ ಮಾರುತ್ತಿದ್ದ ಕ್ಷಣ.. ಚನ್ನಣ್ಣನವರ್ ಎಂಬ ಛಲದಂಕ..