ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹೊಸ ಬಗೆಯ ಸಿನಿಮಾ ನೀಡುವ ಉದ್ದೇಶದಿಂದ ಎನ್‌ಆರ್‌ಐ ಕನ್ನಡಿಗರು ಸೇರಿ 'ರತ್ನಮಂಜರಿ' ಎಂಬ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಕೂಡಾ ರೆಡಿಯಾಗಿದೆ. ಇನ್ನು ಸಿನಿಮಾವನ್ನು ಪ್ರಸಿದ್ಧ್ ಎಂಬ ಎನ್‌ಆರ್‌ಐ ಕನ್ನಡಿಗನೇ ನಿರ್ದೇಶಿಸಿರುವುದು ಕೂಡಾ ವಿಶೇಷ. ಸಿನಿಮಾ ಸೆನ್ಸಾರ್ ಅಂಗಳದಲ್ಲಿದ್ದು ನಿನ್ನೆ ಚಿತ್ರದ ಆಡಿಯೋ ಬಿಡುಗಡೆಯಾಗಿದೆ.
ಕಲಾವಿದರ ಸಂಘದಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ನಾದಬ್ರಹ್ಮ ಹಂಸಲೇಖ, ಫಿಲ್ಮ್ ಚೇಂಬರ್ ಕಾರ್ಯದರ್ಶಿ ಭಾ.ಮ ಹರೀಶ್, ಸ್ಯಾಂಡಲ್ವುಡ್ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್, ನಟ ರಾಕೇಶ್ ಅಡಿಗ ಆಗಮಿಸಿ ಚಿತ್ರತಂಡಕ್ಕೆ ವಿಶ್ ಮಾಡಿದರು. ಚಿತ್ರದ ಹಾಡುಗಳಿಗೆ ಹಂಸಲೇಖ ಶಿಷ್ಯ ಹರ್ಷವರ್ಧನ್ ರಾಜ್ ಟ್ಯೂನ್ ಕಂಪೋಸ್ ಮಾಡಿದ್ದಾರೆ. ನಿರ್ದೇಶಕ ಪ್ರಸಿದ್ಧ್ ಕೂಡಾ ಹಂಸಲೇಖ ಗರಡಿಯಲ್ಲಿ ಪಳಗಿರುವವರು. ಚಿತ್ರದಲ್ಲಿ ನಾಯಕನಾಗಿ ರಾಜ್ ಚರಣ್ ಹಾಗೂ ನಾಯಕಿಯಾಗಿ ಅಖಿಲಾ ಪ್ರಕಾಶ್ ನಟಿಸಿದ್ದಾರೆ. ವಿಶೇಷ ಅಂದ್ರೆ ರಾಜ್ ಚರಣ್ ಹಾಗೂ ಅಖಿಲಾ ಇಬ್ಬರೂ ನಾಗತಿಹಳ್ಳಿ ಚಂದ್ರಶೇಖರ್ ಅವರ ವಿದ್ಯಾರ್ಥಿಗಳು.
ಇನ್ನು ಚಿತ್ರದಲ್ಲಿ ರತ್ನ ಮಂಜರಿ ಯಾರೆಂಬುದು ಕೊನೆಯವರೆಗೂ ಸಸ್ಪೆನ್ಸ್ ಆಗಿದೆ ಎಂದು ಚಿತ್ರತಂಡ ಹೇಳಿದೆ. ಎನ್‌ಆರ್‌ಐ ಕನ್ನಡಿಗರಾದ ನಟರಾಜ್ ಹಳೇಬಿಡು ಮತ್ತು ಡಾ. ನವೀನ್ ಕುಮಾರ್ ಜಂಟಿಯಾಗಿ ಸಿನಿಮಾ ನಿರ್ಮಿಸಿದ್ದಾರೆ. ಚಿತ್ರದ ಬಹುತೇಕ ಶೂಟಿಂಗ್ ನ್ಯೂಯಾರ್ಕ್, ನ್ಯೂಜೆರ್ಸಿ, ಮಲೇಷ್ಯಾ ಹಾಗೂ ಇನ್ನಿತರ ಸ್ಥಳಗಳಲ್ಲಿ ನಡೆದಿದೆ. ತಲಕಾವೇರಿಯಲ್ಲಿ ಚಿತ್ರೀಕರಣಗೊಂಡ ಕೊನೆಯ ಕನ್ನಡ ಚಿತ್ರ ಕೂಡಾ ಇದಾಗಿದೆ. ಏಕೆಂದರೆ ಸದ್ಯಕ್ಕೆ ತಲ ಕಾವೇರಿಯಲ್ಲಿ ಯಾವುದೇ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ದೊರೆಯುತ್ತಿಲ್ಲ.
ಇನ್ನು ಚಿತ್ರದ ಹಾಡುಗಳು ಯ್ಯೂಟ್ಯೂಬ್‌ನಲ್ಲಿ ಸದ್ದು ಮಾಡುತ್ತಿದ್ದು ಪುನೀತ್ ರಾಜ್ಕುಮಾರ್ ಕೂಡಾ ಚಿತ್ರಕ್ಕೆ ಹಾಡಿದ್ದಾರೆ. ಇನ್ನೂ ಕೆಲವೊಂದು ವಿಶೇಷತೆಗಳಿಂದ ಕೂಡಿರುವ ಸಿನಿಮಾ ಮೇ ೧೦ ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.