ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಮತ್ತು ಬಹು ಬೇಡಿಕೆಯ ನಟಿಯರ ಸಾಲಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಇದ್ದಾರೆ. ತೆಲುಗು, ತಮಿಳಷ್ಟೇ ಅಲ್ಲ, ಹಿಂದಿಯಲ್ಲೂ ಬ್ಯುಸಿಯಾಗಿರುವ ರಶ್ಮಿಕಾ, ಬಾಲಿವುಡ್ನಲ್ಲೂ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದೆಲ್ಲದರಿಂದ ರಶ್ಮಿಕಾಗೆ ಮನೆಗೆ ಹೋಗುವ ಅವಕಾಶವೇ ಸಿಗುತ್ತಿಲ್ಲವಂತೆ. ತಂದೆ-ತಾಯಿಯನ್ನು ಭೇಟಿಯಾಗುವುದಕ್ಕೆ ಸಾಧ್ಯವಾಗುತ್ತಿಲ್ಲವಂತೆ. ಕಳೆದ ವರ್ಷ ಲಾಕ್ಡೌನ್ ಮುಗಿಸಿ ವಾಪಸ್ ಕೆಲಸಕ್ಕೆ ಹೊರಟ ರಶ್ಮಿಕಾ, ಅಲ್ಲಿಂದ ಇಲ್ಲಿಯವರೆಗೂ ತಮ್ಮ ತಂದೆ-ತಾಯಿಯನ್ನು ನೋಡಿಲ್ಲ ಎಂದರೆ ಆಶ್ಚರ್ಯವಾಗಬಹುದು. ಹಾಗಂತ ಅವರೇ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ರಶ್ಮಿಕಾ ಅವರ ಅಪ್ಪ-ಅಮ್ಮನ ಮದುವೆ ವಾರ್ಷಿಕೋತ್ಸವ ಇತ್ತು. ಈ ಸಂದರ್ಭದಲ್ಲಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಅವರು, ಆ್ಯನಿವರ್ಸರಿಗೆ ಖುದ್ದು ಹಾಜರಾಗುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಆ ಪೋಸ್ಟ್ ಮೂಲಕವೇ ಅಪ್ಪ-ಅಮ್ಮನಿಗೆ ಶುಭ ಕೋರಿದ್ದಾರೆ.
ನಾನು ನಿಮ್ಮನ್ನು ನೋಡಿದ್ದು ಕಳೆದ ವರ್ಷದ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ. ಅಲ್ಲಿಂದ ನಿಮ್ಮನ್ನು ಮುಖತಃ ನೋಡುವುದಕ್ಕೆ, ಮಾತಾಡಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರತಿ ಸಲವೂ ನಾನು ಮನೆಗೆ ಬರಬೇಕು ಎನ್ನುವಾಗ, ಒಂದೋ ಲಾಕ್ಡೌನ್ ಇರುತ್ತದೆ, ಇಲ್ಲ ಶೂಟಿಂಗ್ ಶುರುವಾಗಿರುತ್ತದೆ. ನಿಮ್ಮನ್ನೆಲ್ಲ ಬಹಳ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರ ಜತೆಗಿನ ಒಂದೊಳ್ಳೆಯ ಫೋಟೋ ಸಹ ನನ್ನ ಹತ್ತಿರ ಇಲ್ಲ. ಹ್ಯಾಪಿ ಆ್ಯನಿವರ್ಸರಿ ಎಂದು ರಶ್ಮಿಕಾ ಶುಭ ಹಾರೈಸಿದ್ದಾರೆ.