ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ನಟನೆಯ ಮತ್ತೊಂದು ತೆಲುಗು ಸಿನಿಮಾ ಬಾಲಿವುಡ್ಗೆ ರಿಮೇಕ್ ಆಗಲಿದೆ ಎನ್ನಲಾಗುತ್ತಿದೆ. ವಿಜಯ್ ದೇವರಕೊಂಡಗೆ ಹೆಸರು ತಂದುಕೊಟ್ಟ 'ಅರ್ಜುನ್ ರೆಡ್ಡಿ' ಸಿನಿಮಾ 'ಕಬೀರ್ ಸಿಂಗ್' ಹೆಸರಿನಲ್ಲಿ ಹಿಂದಿಗೆ ರಿಮೇಕ್ ಆಗಿ ಹಿಟ್ ಸಾಲಿಗೆ ಸೇರಿತ್ತು.

ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ ನಟಿಸಿದ್ದ 'ಗೀತಗೋವಿಂದಂ' ಸಿನಿಮಾ ಕೂಡಾ ಬಾಲಿವುಡ್ಗೆ ರಿಮೇಕ್ ಆಗಲಿದೆ ಎನ್ನಲಾಗುತ್ತಿದೆ. ಈ ಸಿನಿಮಾ ಹಕ್ಕನ್ನು ಬಾಲಿವುಡ್ ಪ್ರಮುಖ ನಿರ್ದೇಶಕ ರೋಹಿತ್ ಶೆಟ್ಟಿ ಪಡೆದಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆ್ಯಕ್ಷನ್, ಸ್ಟಂಟ್ ಸಿನಿಮಾಗಳಿಗೆ ಹೆಸರಾದ ರೋಹಿತ್ ಶೆಟ್ಟಿ ಇದೀಗ ಈ ಪ್ರೇಮಕಥೆಯನ್ನು ಹಿಂದಿಯಲ್ಲಿ ತೆರೆಗೆ ತರಲು ಹೊರಟಿದ್ದು ರೋಹಿತ್ ಈ ಚಿತ್ರಕ್ಕೆ ನಿರ್ಮಾಪಕರಾಗಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಜಯ್ ದೇವರಕೊಂಡ ನಟಿಸಿದ್ದ ಪಾತ್ರವನ್ನು ಹಿಂದಿಯಲ್ಲಿ ಇಷಾನ್ ಖತ್ತರ್ ಮಾಡುತ್ತಿದ್ದಾರೆ ಎಂದು ಬಾಲಿವುಡ್ ಮಂದಿ ಮಾತನಾಡುತ್ತಿದ್ದಾರೆ. ಆದರೆ ಇದರ ಬಗ್ಗೆ ರೋಹಿತ್ ಮಾತನಾಡಿಲ್ಲ. ಈ ಹಿಂದೆ ರೋಹಿತ್ ಶೆಟ್ಟಿ ಟಾಲಿವುಡ್ನ 'ಟೆಂಪರ್' ಸಿನಿಮಾವನ್ನು ಕೂಡಾ ಹಿಂದಿಗೆ ರಿಮೇಕ್ ಮಾಡಿದ್ದರು. ರಣವೀರ್ ಸಿಂಗ್ ನಟಿಸಿದ್ದ ಸಿನಿಮಾ ಸಕ್ಸಸ್ ಆಗಿತ್ತು. ಒಂದು ವೇಳೆ 'ಗೀತಗೋವಿಂದಂ' ಕೂಡಾ ಹಿಂದಿಗೆ ರಿಮೇಕ್ ಆದರೆ ಯಾವ ರೀತಿ ಪ್ರತಿಕ್ರಿಯೆ ದೊರೆಯಲಿದೆ ಎನ್ನುವುದನ್ನು ಕಾದು ನೋಡಬೇಕು.
