ಕಳೆದ ವಾರ ನಟಿ ರಶ್ಮಿಕಾ ಮಂದಣ್ಣ ಕೊಡಗಿನ ನಿವಾಸದ ಮೇಲೆ ನಡೆದ ಐಟಿ ರೈಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೈಸೂರಿನ ಪ್ರಧಾನ ಆದಾಯ ತೆರಿಗೆ ಆಯುಕ್ತರ ಕಚೇರಿಯಲ್ಲಿ ವಿಚಾರಣೆ ಆರಂಭವಾಗಿದೆ. ರಶ್ಮಿಕಾ ಕೂಡಾ ಮೈಸೂರಿಗೆ ಆಗಮಿಸಿದ್ದಾರೆ.
ರಶ್ಮಿಕಾ ಜೊತೆ ತಂದೆ, ತಾಯಿ ಸೇರಿದಂತೆ 9 ಮಂದಿ ಆಗಮಿಸಿದ್ದಾರೆ. ಎರಡು ಬ್ಯಾಗ್ಗಳು, ಒಂದು ಫೈಲ್, ಒಂದು ಕಿಟ್ ಬ್ಯಾಗನ್ನು ಕುಟುಂಬಸ್ಥರು ಹೊತ್ತು ತಂದಿದ್ದಾರೆ. ರಶ್ಮಿಕಾ ತಂದೆ ಮದನ್ ಮಂದಣ್ಣ , ತಾಯಿ ಸುಮನ್ ಮಂದಣ್ಣ ಕೊಡಗಿನಿಂದ ಮೈಸೂರಿಗೆ ಆಗಮಿಸಿದ್ದರೆ, ರಶ್ಮಿಕಾ ಹೈದರಾಬಾದ್ನಿಂದ ಶೂಟಿಂಗ್ ಮುಗಿಸಿ ನೇರವಾಗಿ ಮೈಸೂರಿಗೆ ಆಗಮಿಸಿದ್ದಾರೆ. ನಜರ್ಬಾದ್ನಲ್ಲಿರುವ ಪ್ರಧಾನ ಆದಾಯ ತೆರಿಗೆ ಆಯುಕ್ತರ ಕಚೇರಿಯಲ್ಲಿ ಪ್ರಾದೇಶಿಕ ತೆರಿಗೆ ಆಯುಕ್ತ ಸಂಜಯ್ ಗಾಂಧಿ ನೇತೃತ್ವದಲ್ಲಿ ಅಧಿಕಾರಿಗಳಿಂದ ರಶ್ಮಿಕಾ ವಿಚಾರಣೆ ನಡೆಯುತ್ತಿದೆ. ಸಂಜೆಯೊಳಗೆ ವಿಚಾರಣೆ ಮುಗಿಯುವ ಸಾಧ್ಯತೆ ಇದೆ. ಕಳೆದ ವಾರ ನಡೆದ ರೈಡ್ನಲ್ಲಿ ಅಧಿಕಾರಿಗಳು ಕೆಲ ಮಹತ್ತರ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದ ಹಿನ್ನೆಲೆ ಇಂದು ರಶ್ಮಿಕಾ ಹಾಗೂ ಕುಟುಂಬದವರು ವಿಚಾರಣೆಗೆ ಹಾಜರಾಗಿದ್ದಾರೆ.