ಭಾರತದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಪುಟ್ಟ ಕಂದಮ್ಮಗಳು ಕೂಡ ಕಾಮುಕರ ಕ್ರೌರ್ಯಕ್ಕೆ ಬಲಿಯಾಗುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಉತ್ತರ ಪ್ರದೇಶದ ಅಲಿಗಢದಲ್ಲಿ ಮೂರು ವರ್ಷದ ಮಗುವಿನ ಮೇಲೆ ನಡೆದಿರುವ ಅತ್ಯಾಚಾರ.
ಜೂನ್ 2 ರಂದು ಮೊಹಮ್ಮದ್ ಜಾಹೀದ್ ಎಂಬುವವನ ಕಾಮಕ್ಕೆ ಎಳೆಯ ಕಂದಮ್ಮ ಸುಟ್ಟು ಹೋಗಿದೆ. ಅಪ್ಪ-ಅಮ್ಮನ ಮಡಿಲಲ್ಲಿ ಮಲಗಿ ನಲಿಯಬೇಕಿದ್ದ ಈ ಬಾಲೆ, ಕಸದ ರಾಶಿಯ ನಡುವೆ ಸತ್ತ ಹೆಣವಾಗಿ ಮಲಗಿದೆ. ಈ ಮಗುವಿನ ಪೋಷಕರು 10 ಸಾವಿರ ರೂ ಸಾಲ ಮರುಪಾವತಿ ಮಾಡಲಿಲ್ಲ ಎನ್ನುವ ಕಾರಣಕ್ಕೆ ಕೀಚಕ ಮೊಹಮ್ಮದ್,ಈ ಮಗುವಿನ ಮೇಲೆ ಅತ್ಯಾಚಾರ ನಡೆಸಿ ನಂತರ ಬೆಂಕಿ ಹಚ್ಚಿ ಕೊಲೆ ಮಾಡಿ, ಡಂಪಿಂಗ್ ಯಾರ್ಡ್ನಲ್ಲಿ ಎಸೆದಿದ್ದ.ಈಗಾಗಲೇ ಈತನನ್ನು ಬಂಧಿಸಿರುವ ಪೊಲೀಸರು ಕಂಬಿ ಹಿಂದೆ ಅಟ್ಟಿದ್ದಾರೆ.
ಇದೀಗ ಇಡೀ ದೇಶಾದ್ಯಂತ ಈ ಪ್ರಕರಣದ ವಿರುದ್ಧ ಧ್ವನಿ ಎತ್ತಲಾಗಿದೆ. ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆಯಾಗುವ ವರೆಗೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಮಾನವ ಸಮಾಜ ತಲೆ ತಗ್ಗಿಸುವ ಇಂತಹ ಕ್ರೂರ ಕೃತ್ಯಗಳು ನಿಲ್ಲುವುದು ಯಾವಾಗ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಬಾಲಿವುಡ್ ನಟ ಅಭಿಷೇಕ್ ಬಚ್ಚನ್, ಆಯುಷ್ಮಾನ್ ಖುರಾನ್, ರವೀನಾ ಟಂಡನ್, ಸನ್ನಿ ಲಿಯೋನ್, ಸಿದ್ಧಾರ್ಥ್ ಮಲ್ಹೋತ್ರಾ ಸೇರಿದಂತೆ ಸಾಕಷ್ಟು ತಾರೆಯರು ಘಟನೆ ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಕ್ಕಾಗಿ ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ.
ಇಂದು ಕನ್ನಡ ನಟಿ ಹಾಗೂ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಕೂಡ ಈ ಪ್ರಕರಣ ಪ್ರಸ್ತಾಪಿಸಿ ಟ್ವೀಟ್ ಮಾಡಿದ್ದಾರೆ. ಪ್ರತಿ ಬಾರಿಯೂ ಅತ್ಯಾಚಾರ ನಡೆದಾಗ, ಹೆಣ್ಣುಮಕ್ಕಳು ಧರಿಸುವ ಬಟ್ಟೆ ಇಂತಹ ಘಟನೆಗಳು ನಡೆಯಲು ಕಾರಣ ಎನ್ನುವ ಮಾತುಗಳು ಕೇಳಿ ಬರುತ್ತದೆ. ಈಗ ಹೇಳಿ, ಈ ಪುಟ್ಟ ಕಂದಮ್ಮ ಡೈಪರ್ ಹಾಕಿದ್ದು ತಪ್ಪಾಯಿತಾ? ಎಂದು ಅವರು ಆಕ್ರೋಶಭರಿತವಾಗಿ ಪ್ರಶ್ನಿಸಿದ್ದಾರೆ. ಜತೆಗೆ ಈ ಅತ್ಯಾಚಾರಿಗಳನ್ನು ಕತ್ತರಿಸಬೇಕು, ನೇಣಿಗೆ ಹಾಕಬೇಕು ಎಂದು ಕಿಡಿಕಾರಿದ್ದಾರೆ.