'ಆಕಾಶ ದೀಪ' ಧಾರಾವಾಹಿ ಮೂಲಕ ಕಿರುತೆರೆ ಪಯಣ ಆರಂಭಿಸಿ 'ಪುಟ್ಟಗೌರಿ ಮದುವೆ'ಯಿಂದ ಖ್ಯಾತರಾಗಿ ಇದೀಗ 'ಕನ್ನಡತಿ' ಆಗಿ ಮನೆ ಮಾತಾಗಿರುವ ರಂಜನಿ ರಾಘವನ್ ನಿಮಗೆ ಖಂಡಿತ ಗೊತ್ತಿರುತ್ತಾರೆ. ಇದೀಗ ರಂಜನಿ 'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎನ್ನುತ್ತಿದ್ದಾರೆ.

'ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎನ್ನುವುದು ರಂಜನಿ ರಾಘವನ್ ಹೊಸ ಚಿತ್ರ. ವಿಶೇಷ ಎಂದರೆ ದೂದ್ಪೇಡಾ ದಿಗಂತ್ಗೆ ನಾಯಕಿಯಾಗಿ ರಂಜನಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಐಂದ್ರಿತಾ ರಾಯ್ ಕೂಡಾ ಅಭಿನಯಿಸಿದ್ದು ಮೊದಲ ಭಾಗದಲ್ಲಿ ದಿಗಂತ್ಗೆ ಪತ್ನಿಯೇ ಜೊತೆಯಾಗಿ ನಟಿಸಿದ್ದಾರೆ. ಸೆಕೆಂಡ್ ಹಾಫ್ನಲ್ಲಿ ರಂಜನಿ ರಾಘವನ್ ಪ್ರವೇಶಿಸುತ್ತಾರೆ. ವಿನಾಯಕ್ ಕೋತ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಸಾಗರ, ಸಿಗಂದೂರು, ಬೆಂಗಳೂರು ಹಾಗೂ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ.
ಈ ಚಿತ್ರದಲ್ಲಿ ಅಡಿಕೆ ಬೆಳೆ ಹಾಗೂ ರಸಗೊಬ್ಬರದ ವಿಚಾರದ ಬಗ್ಗೆ ಗಮನ ಸೆಳೆಯಲಾಗಿದೆ. ನಿರ್ದೇಶಕ ಪವನ್ ಕುಮಾರ್, ಮಂಡ್ಯ ರಮೇಶ್, ಮಂಜುನಾಥ್ ಹೆಗ್ಡೆ ಹಾಗೂ ಇನ್ನಿತರರು ನಟಿಸಿದ್ದಾರೆ. ನಂದಕಿಶೋರ್ ಹಾಗೂ ವಿಶ್ವಜಿತ್ ರಾಜ್ ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಪ್ರಜ್ವಲ್ ಪೈ ರಾಗಸಂಯೋಜನೆ ಮಾಡಿದ್ದಾರೆ.

ರಂಜನಿ ರಾಘವನ್ 2017 ರಲ್ಲಿ 'ರಾಜಹಂಸ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಬಂದವರು. 'ಟಕ್ಕರ್', 'ಸತ್ಯಂ' ಸಿನಿಮಾಗಳು ಬಿಡುಗಡೆಯಾಗಬೇಕಿದೆ. ಇದೀಗ ಅವರು ದಿಗಂತ್ಗೆ ಜೊತೆಯಾಗಿದ್ದಾರೆ. ಕನ್ನಡ ಮಾತ್ರವಲ್ಲ ಮಲಯಾಳಂ ಕಿರುತೆರೆಯಲ್ಲಿ ಕೂಡಾ ರಂಜನಿ ನಟಿಸಿದ್ದು 'ಪೌರ್ಣಮಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು.