ರಂಗಾಯಣ ರಘು, ರವಿಶಂಕರ್ ಹಾಗೂ ತಬಲಾ ನಾಣಿ ಅವರನ್ನು ಒಟ್ಟಿಗೆ ಒಂದೇ ಸಿನಿಮಾದಲ್ಲಿ ತರುತ್ತಿರುವುದು ನಿರ್ದೇಶಕ ಹಾಗೂ ಸಂಭಾಷಣೆಗಾರ ಅನಿಲ್ ಕುಮಾರ್. ಈ ಮೂವರಿಗೂ ಚಿತ್ರದ ಕಥಾ ವಸ್ತುವಿನ ಮೇಲೆ ಅಗಾಧ ನಂಬಿಕೆ ಇದೆಯಂತೆ. ಇದು ಕೇವಲ ‘ಕಂಟೆಂಟ್’ ತುಂಬಿದ ಸಿನಿಮಾ ಆಗಲಿದೆ ಎಂಬ ಆತ್ಮ ವಿಶ್ವಾಸ ರಂಗಾಯಣ ರಘು ಅವರು ವ್ಯಕ್ತ ಪಡಿಸಿದ್ದಾರೆ. 50 ರಿಂದ 60 ವರ್ಷ ವಯಸ್ಸಿನ ವ್ಯಕ್ತಿಗಳು ಸಮಾಜದಲ್ಲಿ ಎದುರಿಸುವ ವಿಚಾರಗಳನ್ನು ಇಟ್ಟುಕೊಂಡು ಕಥೆ ಹಣೆಯಲಾಗಿದೆ ಎಂದು ಇವರು ಖುಷಿಯಾಗಿದ್ದಾರೆ.
ಅಂದಹಾಗೆ ಈ ಅನಿಲ್ ಕುಮಾರ್ ಯಾರಪ್ಪಾ ಅಂದರೆ, ಈ ಹಿಂದೆ ಮಾಲಾಶ್ರೀ ಅವರ 'ಶಕ್ತಿ' ಚಿತ್ರಕ್ಕೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದವರು. ಆಮೇಲೆ ದಿಲ್ವಾಲ್ ಹಾಗೂ ಕೃಷ್ಣ-ರುಕ್ಕು ಸಿನಿಮಾ ನಿರ್ದೇಶನ ಮಾಡಿದವರು. ಈಗ ಧೀರಜ್ ರಾಮಕುಮಾರ್ ಹಾಗೂ ಮಾನ್ವಿತಾ ಹರೀಶ್ ಅಭಿನಯದ ‘ದಾರಿ ತಪ್ಪಿದ ಮಗ’ ಸಿನಿಮಾ ನಿರ್ದೇಶನ ಮಾಡಿ ಮುಗಿಸಿದ್ದಾರೆ.
ಮೂವರು ಪ್ರಸಿದ್ಧ ನಟರುಗಳ ಕಾಲ್ಶೀಟ್ ಅನಿಲ್ ಕುಮಾರ್ ಅವರಿಗೆ ಸಿಕ್ಕಿರುವುದು ಅದೃಷ್ಟ. ಸದ್ಯಕ್ಕೆ ಸಿನಿಮಾ ಬಗ್ಗೆ ಇನ್ನಷ್ಟು ಕೆಲಸಗಳನ್ನು ಅನಿಲ್ ಕುಮಾರ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ತಪ್ಪಿಸಿಕೊಂಡಿದ್ದಾರೆ ಎನ್ನುವುದು ಕೂಡ ತಾತ್ಕಾಲಿಕ ಶೀರ್ಷಿಕೆಯಾಗಿದ್ದು, ಇನ್ನೂ ಅಂತಿಮಗೊಂಡಿಲ್ಲ ಎಂದು ಸಹ ಮಾಹಿತಿ ಇದೆ.