ಕೋಟಿ ನಿರ್ಮಾಪಕ ರಾಮು ನಿನ್ನೆ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾದಿಂದಾಗಿ ಕೆಲವು ದಿನಗಳ ಹಿಂದೆ ಎಂ.ಎಸ್. ರಾಮಯ್ಯ ಆಸ್ಪತ್ರೆ ಸೇರಿದ್ದ ಅವರು, ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ಅವರ ಹುಟ್ಟೂರಲ್ಲಿ ನಡೆದಿದೆ.
ರಾಮು ಅವರು ನಿರ್ಮಾಪಕರಾಗಿ 37 ಚಿತ್ರಗಳನ್ನು ನಿರ್ಮಿಸಿದ್ದಾರೆ. ಈ ಪೈಕಿ ಅಪ್ಪನಿಂದ ಶುರುವಾದ ಅವರ ಚಿತ್ರಜೀವನ, ಮಗನ ಚಿತ್ರದ ಮೂಲಕ ಮುಗಿದಿದೆ. ಕೇಳಿ ಆಶ್ಚರ್ಯವಾಗಬಹುದು. ಆದರೂ ಇದು ನಿಜ.
ರಾಮು ಅವರು ನಿರ್ಮಾಪಕರಾಗಿದ್ದು ಡೈನಾಮಿಕ್ ಸ್ಟಾರ್ ದೇವರಾಜ್ ಅಭಿನಯದ 'ಗೋಲಿಬಾರ್' ಚಿತ್ರದಿಂದ. ಅವರ ಕಡೆಯ ಚಿತ್ರ ದೇವರಾಜ್ ಅವರ ಮಗ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಅಭಿನಯದ 'ಅರ್ಜುನ್ ಗೌಡ' ಆಗಿದೆ. ಈ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
'ಗೋಲಿಬಾರ್' ಅಲ್ಲದೆ ದೇವರಾಜ್ ಜೊತೆಗೆ 'ಲಾಕಪ್ ಡೆತ್' ಮತ್ತು 'ಸರ್ಕಲ್ ಇನ್ಸ್ಪೆಕ್ಟರ್' ಚಿತ್ರಗಳನ್ನು ನಿರ್ಮಿಸಿದ್ದರು ರಾಮು. ಅದೇ ರೀತಿ ಪ್ರಜ್ವಲ್ ಜೊತೆಗೆ 'ಅರ್ಜುನ್ ಗೌಡ'ಗಿಂತ ಬಹಳ ವರ್ಷಗಳ ಮೊದಲೇ 'ಗುಲಾಮ' ಎಂಬ ಚಿತ್ರವನ್ನು ಅವರು ನಿರ್ಮಿಸಿದ್ದರು.
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಏಪ್ರಿಲ್ನಲ್ಲಿ 'ಅರ್ಜುನ್ ಗೌಡ' ಬಿಡುಗಡೆಯಾಗಬೇಕಿತ್ತು. ಎರಡು ತಿಂಗಳ ಹಿಂದೆ ನಡೆದ ಚಿತ್ರದ ಪತ್ರಿಕಾಗೋಷ್ಠಿಯಲ್ಲೂ ಅವರು ಈ ವಿಷಯವನ್ನು ಘೋಷಿಸಿದ್ದರು. ಆದರೆ, ಚಿತ್ರ ಬಿಡುಗಡೆಯಾಗುವುದಕ್ಕಿಂತ ಮೊದಲೇ ರಾಮು ಇನ್ನಿಲ್ಲವಾಗಿರುವುದು ದುರಂತವೇ ಸರಿ.