ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 167ನೇ ಸಿನಿಮಾ 'ದರ್ಬಾರ್' ಶೂಟಿಂಗ್ ಭರದಿಂದ ಸಾಗಿದೆ. ಆದರೆ ತಲೈವಾ ರಜನಿಕಾಂತ್ ತಮ್ಮ ಭಾಗದ ಚಿತ್ರೀಕರಣವನ್ನು ಈಗಾಗಲೇ ಮುಗಿಸಿದ್ದಾರೆ. ರಜನಿ ಈಗ ಡಬ್ಬಿಂಗ್ ಕೆಲಸದಲ್ಲಿ ಬ್ಯುಸಿ ಇದ್ದಾರೆ.
![Rajinikanth dubbing for Darbaar movie, ದರ್ಬಾರ್ಗೆ ರಜನಿಕಾಂತ್ ಡಬ್ಬಿಂಗ್ ಆರಂಭ](https://etvbharatimages.akamaized.net/etvbharat/prod-images/5061012_aditya-aruna-cahalam_1511newsroom_1573800657_18.jpg)
ಇತ್ತೀಚೆಗೆ ಚಿತ್ರತಂಡ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿತ್ತು. ರಜನಿಕಾಂತ್ ಈ ಸಿನಿಮಾದಲ್ಲಿ ಆದಿತ್ಯ ಅರುಣಾಚಲ ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್ ಸ್ಟುಡಿಯೋವೊಂದರಲ್ಲಿ ಡಬ್ಬಿಂಗ್ ಮಾಡುತ್ತಿರುವ ಫೋಟೋವೊಂದನ್ನು ಚಿತ್ರದ ನಿರ್ದೇಶಕ ಎ.ಆರ್. ಮುರುಗದಾಸ್ ಟ್ವೀಟ್ ಮಾಡಿದ್ದಾರೆ. ಈ ಪೋಟೋದಲ್ಲಿ ರಜನಿಕಾಂತ್ ಸೋಫಾ ಮೇಲೆ ಕುಳಿತು ಡಬ್ಬಿಂಗ್ ಮಾಡುವುದರಲ್ಲಿ ನಿರತರಾಗಿದ್ದಾರೆ. ಚಿತ್ರದಲ್ಲಿ ತಲೈವಾ ಪುತ್ರಿ ಪಾತ್ರದಲ್ಲಿ ನಿವೇದಾ ಥಾಮಸ್ ಹಾಗೂ ರಜನಿಗೆ ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್ ಸಂಗೀತ ನೀಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷ ಸಂಕ್ರಾಂತಿ ವೇಳೆಗೆ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
![Rajinikanth signed for 168th movie, 168ನೇ ಸಿನಿಮಾಗೆ ರಜನಿಕಾಂತ್ ಸಹಿ](https://etvbharatimages.akamaized.net/etvbharat/prod-images/768-512-4409066-thumbnail-3x2-darbar_1511newsroom_1573800657_738.jpg)
ಈ ನಡುವೆ ರಜನಿ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇದು ರಜನಿ ಅಭಿನಯದ 168 ನೇ ಸಿನಿಮಾವಾಗಿದ್ದು ನಿರ್ದೇಶಕ ಶಿವ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸನ್ ಪಿಕ್ಚರ್ಸ್ ಸಂಸ್ಥೆ ಈ ಸಿನಿಮಾವನ್ನು ನಿಮಿಸುತ್ತಿದ್ದು , ಖ್ಯಾತ ಸಂಗೀತ ನಿರ್ದೇಶಕ ಡಿ. ಇಮ್ಮಾನ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಲಿದ್ದಾರೆ. ಈ ವಿಷಯವನ್ನು ಸನ್ ಪಿಕ್ಚರ್ಸ್ ತನ್ನ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದೆ. ಅಲ್ಲದೆ ಮುಂದಿನ ವರ್ಷ ದೀಪಾವಳಿಗೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ 'ದರ್ಬಾರ್' ಬಿಡುಗಡೆಗೂ ಮುನ್ನವೇ ರಜನಿ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.