ಚೆನ್ನೈ: 10 ದಿನ ಮೊದಲೇ ಚೆನ್ನೈನಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ತಮ್ಮ ಹುಟುಹಬ್ಬವನ್ನ ಆಚರಿಸಿಕೊಂಡರು. ಡಿಸೆಂಬರ್ 12ಕ್ಕೆ ಸೂಪರ್ ಸ್ಟಾರ್, ತಮಿಳು ಚಿತ್ರ ರಸಿಕರ ಆರಾಧ್ಯದೈವ ತಲೈವಾ ಹುಟ್ಟುಹಬ್ಬ. ಆದರೆ, ಅವರು ವಾರ ಮುನ್ನವೇ ತಮ್ಮ ಜನ್ಮದಿನ ಆಚರಿಸಿಕೊಂಡರು. ಅದು ತಮ್ಮ ನೆಚ್ಚಿನ ಅಭಿಮಾನಿ ದಿವ್ಯಾಂಗನ ಕೋರಿಕೆ ಮೇರೆಗೆ.
ಕೇರಳದ ಅಭಿಮಾನಿ ಪ್ರಣವ್ ಸೋಮವಾರ ನೆಚ್ಚಿನ ನಟ ಸಾರ್ವಭೌಮನನ್ನು ಭೇಟಿ ಮಾಡಿ, ತಮ್ಮ ಕಾಲಿಂದಲೇ ಬಿಡಿಸಿದ್ದ ರಜಿನಿಕಾಂತ್ ಫೋಟೋವನ್ನ ಪಡಿಯಪ್ಪಗೆ ತಮ್ಮ ಕಾಲುಗಳಿಂದಲೇ ಅರ್ಪಿಸಿದರು.
ನೆಚ್ಚಿನ ಅಭಿಮಾನಿ ಎರಡೂ ಕೈಗಳು ಇಲ್ಲದ್ದರಿಂದ ತಮ್ಮ ಕಾಲುಗಳ ಮೂಲಕವೇ ಸೂಪರ್ಸ್ಟಾರ್ಗೆ ಫೋಟೋ ಹಸ್ತಾಂತರಿಸಿದರು. ರಜಿನಿ ತಮ್ಮ ಕೈಗಳ ಮೂಲಕ ಪ್ರಣವ್ಗೆ ಶೇಕ್ ಲೆಗ್ ಮಾಡಿ ಗಮನ ಸೆಳೆದರು.
ನೆಚ್ಚಿನ ನಟನ ಭೇಟಿಯಾದ ಖುಷಿಯಲ್ಲಿ ತಮ್ಮ ಕಾಲುಗಳ ಮೂಲಕವೇ ಪ್ರಣವ್ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಅಂದ ಹಾಗೆ ಪ್ರಣವ್ ಕೇರಳದ ಪಾಲಕ್ಕಾಡ ಜಿಲ್ಲೆಯ ಆಲ್ತೂರಿನವರು. ಇತ್ತೀಚೆಗಷ್ಟೇ ಪ್ರಣವ್ ಕೇರಳ ನೆರೆ ಸಂತ್ರಸ್ತರಿಗಾಗಿ ಕೇರಳ ಸಿಎಂ ಪರಿಹಾರ ನಿಧಿಗೆ ಹಣದ ನೆರವು ನೀಡಿ ಗಮನ ಸೆಳೆದಿದ್ದರು.