ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅಖಿಲ್ ಆಗಿ ನಟಿಸಿ ಕರ್ನಾಟಕದಾದ್ಯಂತ ಮನೆ ಮಾತಾಗಿರುವ ರಾಜೇಶ್ ಧ್ರುವ ಅವರ ಬಣ್ಣದ ಪಯಣಕ್ಕೆ ಇದೀಗ ಹತ್ತರ ಹರೆಯ. ಅಖಿಲ್ ಆಗಿ ಕಿರುತೆರೆ ವೀಕ್ಷಕರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ರಾಜೇಶ್ ಧ್ರುವ ಅವರು, ಬಣ್ಣದ ಬದುಕಿನಲ್ಲಿ ಯಶಸ್ವಿ ಹತ್ತು ವರ್ಷ ಪೂರೈಸಿದ್ದಾರೆ. ಹೀರೊ ನಂ 1 ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಇವರು ಮೊದಲ ಬಾರಿ ಬಣ್ಣ ಹಚ್ಚಿದ್ದು 'ಬದುಕು' ಧಾರಾವಾಹಿಯಲ್ಲಿನ ಪಾತ್ರಕ್ಕಾಗಿ.
ಬದುಕು ಧಾರಾವಾಹಿಯಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿದ್ದ ರಾಜೇಶ್ ಧ್ರುವ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ಈ ಧಾರಾವಾಹಿಯ ನಂತರ ಆಕಾಶದೀಪ, ಒಂದೇ ಗೂಡಿನ ಹಕ್ಕಿಗಳು, ಮಿಲನ, ಪ್ರೀತಿ ಎಂದರೇನು, ಸರಯೂ, ಅಗ್ನಿಸಾಕ್ಷಿ, ನಂದಿನಿ, ಅರಮನೆ ಗಿಳಿ ಧಾರಾವಾಹಿಗಳಲ್ಲಿ ನಟಿಸಿರುವ ಇವರು ಇಂದಿಗೂ ಅಖಿಲ್ ಎಂದೇ ಚಿರಪರಿಚಿತ. ಧಾರಾವಾಹಿ ಮುಗಿದು ಒಂದು ವರ್ಷಗಳಾಗುತ್ತಾ ಬಂದರೂ ಜನ ಅಖಿಲ್ ಪಾತ್ರವನ್ನು ಮರೆತಿಲ್ಲ.
ಒಂದೇ ಗೂಡಿನ ಹಕ್ಕಿಗಳು ಧಾರಾವಾಹಿಯಲ್ಲಿ ಖಳನಾಯಕನಾಗಿ ಅಭಿನಯಿಸುರುವ ರಾಜೇಶ್ ಧ್ರುವ ಸಿಗಂಧೂರು ಚೌಡೇಶ್ವರಿ ಸಿನಿಮಾದಲ್ಲಿ ನಟಿಸಿದ್ದಾರೆ. ಮನೋಜ್ಞ ನಟನೆಯ ಮೂಲಕ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿರುವ ರಾಜೇಶ್ ಧ್ರುವ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಅನಿರೀಕ್ಷಿತ, ಆಮಂತ್ರಣ, ರೌದ್ರಂ, ತದ ನಂತರ ಎಂಬ ಕಿರುಚಿತ್ರಗಳಿಗೆ ಸ್ವತಃ ತಾವೇ ಕಥೆ ಬರೆದು, ಸಂಭಾಷಣೆ ತಯಾರು ಮಾಡಿ ನಿರ್ದೇಶನ ಮಾಡಿದ್ದಾರೆ.
ಅದ್ಭುತ ಡ್ಯಾನ್ಸರ್ ಕೂಡ ಹೌದು : ರಾಜೇಶ್ ಧ್ರುವ ಕೇವಲ ನಟ ಮಾತ್ರವಲ್ಲ, ಡ್ಯಾನ್ಸರ್ ಕೂಡ ಹೌದು. ನೃತ್ಯದ ಪ್ರಕಾರಗಳಾಗಿರುವ ಹಿಪ್‌ಹಾಪ್, ಪಾಶ್ಚಾತ್ಯ, ಬಾಲಿವುಡ್ ಶೈಲಿಯ ನೃತ್ಯ ಕಲಿತು ರಾಜೇಶ್ ಶಿರಸಿಯಲ್ಲಿ ಧ್ರುವ ಸ್ಕೂಲ್ ಆಫ್ ಡ್ಯಾನ್ಸ್ ಆರಂಭಿಸಿ ನೃತ್ಯಪ್ರೇಮಿಗಳಿಗೆ ಡ್ಯಾನ್ಸ್ ಹೇಳಿ ಕೊಡುತ್ತಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತಕಧಿಮಿತಾ ಡ್ಯಾನ್ಸ್ ರಿಯಾಲಿಟಿ ಶೋವಿನಲ್ಲಿ ಸ್ಪರ್ಧಿಯಾಗಿ ಇವರು ಕಾಣಿಸಿಕೊಂಡಿದ್ದರು.
ಬಾಲ್ಯದಿಂದಲೂ ತಾನೊಬ್ಬ ನಟನಾಗಬೇಕು ಎಂಬ ಮಹಾದಾಸೆ ಹೊತ್ತು ಈ ನಟನಾ ಜಗತ್ತಿಗೆ ಬಂದ ರಾಜೇಶ್ ಧ್ರುವ ಇಂದು ಯಶಸ್ವಿ 10 ವರ್ಷ ಪೂರೈಸಿರುವುದು ನಿಜಕ್ಕೂ ಸಂತಸದ ಸಂಗತಿ.