ಜೈಪುರ (ರಾಜಸ್ಥಾನ): ದೇಶದಲ್ಲಿ ಭಾರಿ ಚರ್ಚೆಯನ್ನು ಹುಟ್ಟು ಹಾಕಿರುವ 'ದಿ ಕಾಶ್ಮೀರ್ ಫೈಲ್ಸ್' ಚಿತ್ರಕ್ಕೆ ರಾಜಸ್ಥಾನದಲ್ಲಿ ತೆರಿಗೆ ರಹಿತ ಪ್ರದರ್ಶನದ ಅವಕಾಶ ನೀಡಬೇಕೆಂದು ಕಾಂಗ್ರೆಸ್ ಸರ್ಕಾರಕ್ಕೆ ತಮ್ಮದೇ ಪಕ್ಷದ ಶಾಸಕರೊಬ್ಬರು ಆಗ್ರಹಿಸಿದ್ದಾರೆ.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ಉತ್ತಮ ಪ್ರದರ್ಶನ ಕಾಣುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಹಿಂದೂಗಳ ಹತ್ಯೆ ಮತ್ತು ಅವರ ವಲಸೆ ಕುರಿತಾದ ಈ ಚಿತ್ರಕ್ಕೆ ಬಿಜೆಪಿ ಆಡಳಿತ ಇರುವ ಕರ್ನಾಟಕ, ಹರಿಯಾಣ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ತೆರಿಗೆ ರಹಿತ ಪ್ರದರ್ಶನದ ಬಗ್ಗೆ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಣೆಗೆ ಪೊಲೀಸರಿಗೆ ರಜೆ ನೀಡಿದ ಮಧ್ಯಪ್ರದೇಶ
ಇತ್ತ, ರಾಜಸ್ಥಾನದಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಚಿತ್ರಕ್ಕೆ ಇಂತಹ ಅವಕಾಶ ಮಾಡಿಕೊಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಇದಕ್ಕೆ ಧ್ವನಿಗೂಡಿಸಿರುವ ಕಾಂಗ್ರೆಸ್ ಶಾಸಕ ಭನ್ವರ್ ಲಾಲ್ ಶರ್ಮಾ, ನಮ್ಮ ರಾಜ್ಯದಲ್ಲೂ ಸಹ ತೆರಿಗೆ ರಹಿತ ಪ್ರದರ್ಶನದ ಅವಕಾಶ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಯಾದ ಬಿಜೆಪಿ ನಾಯಕಿ ವಸುಂಧರಾ ರಾಜೇ ಕೂಡ ಚಿತ್ರಕ್ಕೆ ತೆರಿಗೆ ಮುಕ್ತ ಅವಕಾಶ ಕೊಡಬೇಕೆಂದು ಒತ್ತಾಯಿಸಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: 'ದಿ ಕಾಶ್ಮೀರ ಫೈಲ್ಸ್': ಮೂರು ರಾಜ್ಯಗಳಲ್ಲಿ ತೆರಿಗೆ ರಹಿತ ಪ್ರದರ್ಶನಕ್ಕೆ ಅವಕಾಶ