ಏಪ್ರಿಲ್ 24 ಬಂತು ಅಂದ್ರೆ ಅಣ್ಣಾವ್ರ ಅಭಿಮಾನಿಗಳಿಗೆ ಏನೋ ಪುಳಕ ಹಾಗೂ ಸಂತೋಷ. ಅನೇಕ ಕಡೆ ರಾಜ್ಯದಲ್ಲಿ ಅಣ್ಣಾವ್ರ ಹುಟ್ಟುಹಬ್ಬ ಆಚರಿಸುತ್ತಾರೆ. ಈ ವರ್ಷ ಕೊರೊನಾದಿಂದ ‘ಅಭಿಮಾನಿ ದೇವರುಗಳು’ ತಾವಿರುವ ಕಡೆಯೇ ಅಣ್ಣಾವ್ರನ್ನು ನೆನೆಯಬೇಕಾಗಿದೆ.
ಡಾ. ರಾಜಕುಮಾರ್ ಅವರ ಕಟ್ಟಾ ಅಭಿಮಾನಿ ಬೆಂಗಳೂರಿನ ಉತ್ತರಹಳ್ಳಿಯ ಶ್ರೀ ಹರಿಪ್ರಸಾದ್ ರಾಜ್ ಜನ್ಮದಿನಕ್ಕೆ ವಿಶೇಷವಾಗಿ ನುಡಿ ನಮನ ಸಲ್ಲಿಸಿದ್ದಾರೆ.
ಯಾರಿಹರು ನಮ್ಮೊಡನೆ ಹರಿಶ್ಚಂದ್ರ, ಬಬ್ರುವಾಹನ, ಮಯೂರ, ಕೃಷ್ಣದೇವರಾಯರ ನೋಡಿರುವವರು.
ಆದರೂ ಉಳಿದಿಲ್ಲವೇ ಅಚ್ಚಳಿಯದೆ ನಮ್ಮ ನಿಮ್ಮೆಲ್ಲರ ಮನದಲ್ಲಿ ರಾಜರಾಗಿ ರಾಜಕುಮಾರರಾಗಿ ಅಜರಾಮರರಾಗಿ.
ಭಕ್ತಿಯಲಿ ಕನಕ, ಕುಂಬಾರ, ಕಣ್ಣಪ್ಪ, ಕಬೀರರ ಪರಕಾಯ ಆದರೂ.
ಕೆರಳಿದ ಸಿಂಹನಾಗಿ ಯಾವುದಕ್ಕೂ ಕಮ್ಮಿ ಎನ್ನದೆ ಅಬ್ಬರಿಸಿ ಬೊಬ್ಬಿರಿಯಲಿಲ್ಲವೇ ರಾವಣ ಹಿರಣ್ಯಕಶಿಪುವಾಗಿ.
ಯುವಕರಿಗೆ ಬಂಗಾರದ ಮನುಷ್ಯನಾಗಿ ಗುರಿ ನೀಡಿದ ಶಂಕರ್ ಗುರು.
ಸಂಪತ್ತಿಗೆ ಸವಾಲ್ ಹಾಕಿ ಪ್ರೇಮದ ಕಾಣಿಕೆ ನೀಡಿದರೂ ಇವರು ತಾಯಿಗೆ ತಕ್ಕ ಮಗನೇ ಸರಿ.
ಬಂಗಾರದ ಪಂಜರವೇ ಆಗಲಿ, ಗಂಧದ ಗುಡಿಯೇ ಇರಲಿ. ಎಂದಿಗೂ ಕುಲಗೌರವವ ಮರೆಯದ ಮುತ್ತು ಈ ನಮ್ಮ ರಾಜ ಮುತ್ತುರಾಜ.
ಎಮ್ಮೆ ತಮ್ಮಣ್ಣ, ಚೂರಿ ಚಿಕ್ಕಣ್ಣನಿಂದ ಕೆಂಟುಕಿ ಕರ್ನಲ್ ತನಕ ಚಲಿಸುವ ಮೋಡದ ರೀತಿ ಸಾಗಿದ ದೇವತಾ ಮನುಷ್ಯ. ಚಿತ್ರರಂಗಕ್ಕೆ ಹೊಸಬೆಳಕು ನೀಡಿದ ಭಾಗ್ಯವಂತ ನೀವೇ ನಮ್ಮ ಧ್ರುವತಾರೆ.
ನಟನೆ ನಾಟ್ಯ ಸ್ವರ ಶ್ರುತಿಗಳನು ಹಾಲು ಜೇನಿನಂತೆ ಅಪೂರ್ವ ಸಂಗಮ ಮಾಡಿದ ಜಗ ಮೆಚ್ಚಿದ ಮಗ. ಆದಿಗೂ ಅನಾದಿಗೂ ರವಿಚಂದ್ರರಂತೆ ಹೊಳೆಯುತ್ತಿರುವ ಬಹದ್ದೂರ್ ಗಂಡು ನಾ ನಿನ್ನ ಮರೆಯಲಾರೆ.
ಸ್ವಚ್ಛ ಕನ್ನಡದ ಮೇಯರ್ ಮುತ್ತಣ್ಣನಿಂದ ಸಿ ಐ ಡಿ ರಾಜಣ್ಣ ತನಕ ಮನಸ್ಸಿದ್ದರೆ ಮಾರ್ಗ ಎಂದು ತೋರಿದ ನಟಸಾರ್ವಭೌಮ. ನಿಮ್ಮನ್ನು ಹೊಂದಿದ್ದು ನಮ್ಮ ನಾಡಿನ ಭಾಗ್ಯ. ಇಂದೇ ನಮಗೆ ಮಹಾ ಸುದಿನ. ನಿಮ್ಮ ಜೀವನ ಚೈತ್ರ ನಮಗೆ ಸದಾ ನಾದಮಯ.
ರಾಜಣ್ಣ ಇದೋ ನಿಮಗಿದು ನಮ್ಮ ನುಡಿ ನಮನ ಎಂದು ಅಭಿಮಾನ ಹರಿಪ್ರಸಾದ್ ಉತ್ತರಹಳ್ಳಿ ಮನಮುಟ್ಟುವಂತೆ ಬರೆದಿದ್ದಾರೆ.