ಡೆಡ್ಲಿ ವೈರಸ್ ಕೊರೊನಾ ಸೋಂಕಿತರಿಗೆ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹಾಗೂ ನರ್ಸ್ಗಳಿಗೆ ಊಟದ ವ್ಯವಸ್ಥೆ ಮಾಡುವ ಸಲುವಾಗಿ ತುಪ್ಪದ ಹುಡುಗಿ ನಟಿ ರಾಗಿಣಿ ದ್ವಿವೇದಿ ಖಾಸಗಿ ಕಿಚನ್ ಒಂದನ್ನು ಬಾಡಿಗೆಗೆ ಪಡೆದು ದಿನವೂ 500 ಕೊರೊನಾ ವಾರಿಯರ್ಸ್ಗೆ ಊಟ ಪೂರೈಕೆ ಮಾಡ್ತಿದ್ದಾರೆ.
ಲಾಕ್ಡೌನ್ ಆದಾಗಿಂದ ನಿರಂತರವಾಗಿ ಹಸಿದವರ ಹೊಟ್ಟೆ ತುಂಬಿಸುವುದರ ಜೊತೆಗೆ ರಾಗಿಣಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಹಾಗೂ ನರ್ಸ್ಗಳಿಗೆ ತಮ್ಮ ಮನೆಯಲ್ಲಿ ಅಡುಗೆ ತಯಾರಿಸಿ ಹಂಚುತ್ತಿದ್ದರು. ಅದರೆ ಸದ್ಯ ಊಟದ ಅಗತ್ಯತೆ ಹೆಚ್ಚಾಗಿರುವ ಕಾರಣ ಮನೆಯಲ್ಲಿ ಅಷ್ಟು ಜನರಿಗೆ ಅಡುಗೆ ಮಾಡಲು ಸಾಧ್ಯವಾಗದೆ ಮಾಗಡಿ ರಸ್ತೆಯಲ್ಲಿ ಕಿಚನ್ ಬಾಡಿಗೆ ಪಡೆದು ಅಲ್ಲಿ ಫುಡ್ ತಯಾರಿಸಿ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡ್ತಿದ್ದಾರೆ.
ಇನ್ನು ಕೊರೊನಾ ವಾರಿಯರ್ಸ್ಗೆ ರಾಗಿಣಿ ದ್ವಿವೇದಿ ವೆಲ್ಫೇರ್ ಮೂಲಕ ಊಟ ಪೂರೈಕೆ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ನಟಿ ರಾಗಿಣಿ, ನಮ್ಮ ಮನೆಯಲ್ಲಿ ಜಾಸ್ತಿ ಜನರಿಗೆ ಊಟದ ವ್ಯವಸ್ಥೆ ಮಾಡಲು ಆಗದ ಕಾರಣ ಕಿಚನ್ ಬಾಡಿಗೆ ಪಡೆದಿದ್ದೇನೆ. ನಮ್ಮ ಆರ್ಡಿ ವೆಲ್ಫೇರ್ಗೆ ಸಾಕಷ್ಟು ಜನರು ನೆರವು ನೀಡ್ತಿದ್ದಾರೆ. ಇಂತಹ ಸಮಯದಲ್ಲಿ ನಾವು ಒಬ್ಬರ ನೆರವಿಗೆ ಬರುವುದು ಉತ್ತಮ. ಅಲ್ಲದೆ ನಮ್ಮ ಆರ್ಡಿ ವೆಲ್ಫೇರ್ಗೆ ಸಾಕಷ್ಟು ಜನ ಕರೆ ಮಾಡಿ ನೆರವು ಕೇಳ್ತಾರೆ. ನಾವು ಈಗಾಗಲೇ ಸಾಕಷ್ಟು ಜನರಿಗೆ ಫುಡ್, ಮೆಡಿಸಿನ್ ವ್ಯವಸ್ಥೆ ಮಾಡಿದ್ದೇವೆ ಎಂದು ರಾಗಿಣಿ ಹೇಳಿದರು.
ಅಲ್ಲದೇ ಲಾಕ್ಡೌನ್ ಸಡಿಲಿಕೆ ಆಗಿದೆ ಎಂದು ಬೇಕಾಬಿಟ್ಟಿ ತಿರುಗಾಡದೆ ಮೊದಲು ಮುನ್ನೆಚ್ಚರಿಕೆ ವಹಿಸಬೇಕಿದೆ. ಇಂತಹ ಸಮಯದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಹಾಗೆಯೇ ಕಂಟೈನ್ಮೆಂಟ್ ಝೋನ್ನಲ್ಲಿ ಇರುವವರು ದಯವಿಟ್ಟು ಹೊರಗೆ ಬರಬೇಡಿ ಎಂದು ರಾಗಿಣಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ರು.