ಕೆಲಸಕ್ಕೂ ಹೋಗಲಾಗದೆ, ಮೂರು ಹೊತ್ತಿನ ಊಟವೂ ಸಿಗದೆ ಕಷ್ಟಪಡುತ್ತಿರುವರಿಗೆ ಈಗಾಗಲೇ ಸಾಕಷ್ಟು ಜನರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ನಿರ್ಗತಿಕರಿಗೆ ಅವಶ್ಯಕವಿರುವ ಅಕ್ಕಿ, ಬೇಳೆ ಹಾಗೂ ಇನ್ನಿತರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ಕೆಲವರು ತಾವೇ ಆಹಾರ ತಯಾರಿಸಿ ಅದನ್ನು ಪ್ಯಾಕ್ ಮಾಡಿ ಹಸಿದವರಿಗೆ ನೀಡುತ್ತಿದ್ಧಾರೆ.
ಮೊನ್ನೆಯಷ್ಟೇ ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ತಾವೇ ಖುದ್ದು ಕೊಳಚೆ ಪ್ರದೇಶಗಳಿಗೆ ತೆರಳಿ ಕೆಲವೊಂದು ಕುಟುಂಬಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ನೀಡಿ ಬಂದಿದ್ದರು. ಇದೀಗ ಸ್ಯಾಂಡಲ್ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಸಂಕಷ್ಟದಲ್ಲಿರುವ ಮಂಗಳಮುಖಿಯರ ಸಹಾಯಕ್ಕೆ ಧಾವಿಸಿದ್ಧಾರೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುಂಗಳಮುಖಿಯರ ಮನೆ ಮನೆಗೆ ತೆರಳಿದ ರಾಧಿಕಾ ಕುಮಾರಸ್ವಾಮಿ ಆಹಾರ ಧಾನ್ಯಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಟೆಂಪೋದಲ್ಲಿ ತಂದಿದ್ದ ಎಲ್ಲಾ ಸಾಮಗ್ರಿಗಳನ್ನು ಸಹೋದರ ಹಾಗೂ ಆಪ್ತರೊಂದಿಗೆ ಸೇರಿ ಮಂಗಳಮುಖಿಯರಿಗೆ ವಿತರಿಸಿ ಜಾಗೃತರಾಗಿರುವಂತೆ ಮನವಿ ಮಾಡಿದರು.
ರಾಧಿಕಾ ತಮ್ಮ ಮನೆಗೆ ಬಂದು ಅಗತ್ಯ ಸಾಮಗ್ರಿಗಳನ್ನು ವಿತರಿಸಿದ್ದಕ್ಕೆ ಸಂತೋಷ ಪಟ್ಟ ಮಂಗಳಮುಖಿಯರು ಧನ್ಯವಾದ ತಿಳಿಸಿದರು. ಅಲ್ಲದೆ ನಟಿಯೊಂದಿಗೆ ಫೋಟೋ ತೆಗೆಸಿಕೊಂಡು ಖುಷಿ ಪಟ್ಟರು.