ಹೈದರಾಬಾದ್: ಇತ್ತೀಚೆಗೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ಡಾರ್ಲಿಂಗ್ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್' ಸಿನಿಮಾವು ಅಭಿಮಾನಿಗಳನ್ನು ರಂಜಿಸುವಲ್ಲಿ ವಿಫಲವಾಗಿದೆ ಎಂದು ಹಲವರು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. ಭಾರಿ ನಿರೀಕ್ಷೆ ಇಟ್ಟುಕೊಂಡು ಸಿನಿಮಾ ನೋಡಿ ಜಾಲತಾಣದಲ್ಲಿ ಬ್ಯಾಡ್ ಕಾಮೆಂಟ್ ಮಾಡುತ್ತಿರುವ ಅಭಿಮಾನಿಗಳಿಗೆ ಚಿತ್ರ ನಿರ್ದೇಶಕ ರಾಧಾಕೃಷ್ಣ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಚಿತ್ರದ ಬಗ್ಗೆ ಬರುತ್ತಿರುವ ನೆಗೆಟಿವ್ ಕಾಮೆಂಟ್‌ಗಳಿಗೆ ಈ ರೀತಿಯಾಗಿ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. ಚಿತ್ರವು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಕೆಲ ವರ್ಗಕ್ಕೆ ಚಿತ್ರದ ಕಥೆ ಹಿಡಿಸದೇ ಇರಬಹುದು. ಈ ಮೊದಲೇ ಹೇಳಿದಂತೆ ಇದೊಂದು ಪ್ರೇಮ ಕಥೆ. ಲವ್ ಸ್ಟೋರಿಯಿಂದ ಇಲ್ಲಿ ಬೇರೆ ಏನನ್ನು ನಿರೀಕ್ಷೆ ಮಾಡಲಾಗುವುದಿಲ್ಲ ಎಂದಿದ್ದಾರೆ.

ಶಾಖಾಹಾರಿ ಹೋಟೆಲ್ಗೆ ಹೋಗಿ ನೀವು ಚಿಕನ್ ಬಿರಿಯಾನಿಯನ್ನು ಹೇಗೆ ನಿರೀಕ್ಷಿಸುತ್ತೀರಿ? ನಾವು ಈಗಾಗಲೇ 'ರಾಧೆ ಶ್ಯಾಮ್' ಒಂದು ಸುಂದರ ಪ್ರೇಮಕಥೆ ಎಂದು ಹೇಳಿದ್ದೇವೆ. ಆದರೂ ಚಿತ್ರದಲ್ಲಿ ಯಾವುದೇ ಆ್ಯಕ್ಷನ್ ಇಲ್ಲ ಎಂದು ವಿಮರ್ಶಕರು ಹೇಳಿಕೊಂಡು ಓಡಾಡುತ್ತಿದ್ದಾರೆ. ಇದು ನಿಜವಾಗಿಯೂ ಅರ್ಥವಾಗಿದೆಯೇ? ಎಂದು ವೀಕ್ಷಕರನ್ನು ಪ್ರಶ್ನಿಸಿದ್ದಾರೆ.
ಮೊನ್ನೆಯಷ್ಟೇ ಪ್ರಭಾಸ್ ಕೂಡ ತಮ್ಮ ಆ್ಯಕ್ಷನ್ ಇಮೇಜ್ನಿಂದ ದೂರವಾಗಿ ವಿಭಿನ್ನ ಸಿನಿಮಾ ಮಾಡುವ ಆಸೆಯನ್ನು ಬಿಚ್ಚಿಟ್ಟಿದ್ದರು. ಅದರ ಭಾಗವಾಗಿಯೇ ಈ ‘ರಾಧೆ ಶ್ಯಾಂ’ ಪ್ರೇಮಕಥೆ. ಇದೊಂದು ಪೀರಿಯಡ್ ರೊಮ್ಯಾಂಟಿಕ್ ಡ್ರಾಮಾ. ಹಸ್ತಸಾಮುದ್ರಿಕ ತಜ್ಞರ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ಪ್ರೀತಿ ಮತ್ತು ಹಣೆಬರಹವೇ ಚಿತ್ರದ ಮೇನ್ ಕಾನ್ಸಪ್ಟ್ ಎಂದಿದ್ದಾರೆ.
'ರಾಧೆ ಶ್ಯಾಮ್' ಸಿನಿಮಾವು ಚಿತ್ರ ಪ್ರೇಕ್ಷಕರ ನಿರೀಕ್ಷೆ ಹುಸಿಗೊಳಿಸಿದರೂ ಹಣ ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ. ಮಾರ್ಚ್ 11 ರಂದು ಬಿಡುಗಡೆಯಾಗಿದ 'ರಾಧೆ ಶ್ಯಾಮ್' ಕೇವಲ ಮೂರು ದಿನಗಳಲ್ಲಿ 151 ಕೋಟಿ ರೂ. ಗಳಿಸಿದೆ.