ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಡ್ರಗ್ಸ್ ಡೀಲ್ ಮಾಡೋಕೆ ರೆಡಿಯಾಗಿದ್ದಾರೆ. ಇವರು ಸದ್ದಿಲ್ಲದೆ ತಮಿಳಿನ ‘ಕೋಲಮಾವು ಕೋಕಿಲ’ ಚಿತ್ರದ ರೀಮೇಕ್ನಲ್ಲಿ ನಯನತಾರ ಪಾತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ನಯನತಾರ ಹಾಗೂ ಯೋಗಿ ಬಾಬು ನಟನೆಯ ಈ ಫಿಲಂ ಕಾಲಿವುಡ್ನಲ್ಲಿ ಹೊಸ ಟ್ರೆಂಡ್ ಸೆಟ್ ಮಾಡಿ, ಸಖತ್ ಹಿಟ್ ಆಗಿತ್ತು. ಈಗ ಈ ಚಿತ್ರವನ್ನು ಕನ್ನಡಕ್ಕೆ ತರಲು ನಿರ್ದೇಶಕ ಮಯೂರ ರಾಘವೇಂದ್ರ ರೆಡಿಯಾಗಿದ್ದಾರೆ. ಈ ಹಿಂದೆ 'ಕನ್ನಡ್ ಗೊತ್ತಿಲ್ಲ' ಎಂಬ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿ ಸೈ ಎನ್ನಿಸಿಕೊಂಡಿದ್ದ ನಿರ್ದೇಶಕ ಮಯೂರ ರಾಘವೇಂದ್ರ ಈಗ ರಿಮೇಕ್ ಚಿತ್ರ ಮಾಡಲು ಹೊರಟಿದ್ದಾರೆ.
'ಕೋಲಮಾವು ಕೋಕಿಲ' ಕಾಮಿಡಿ, ಕ್ರೈಂ, ಥ್ರಿಲ್ಲರ್ ಚಿತ್ರವಾಗಿದ್ದು, ತಮಿಳಿನಲ್ಲಿ ನಯನತಾರ ಡ್ರಗ್ ಡೀಲರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಇದೇ ಪಾತ್ರವನ್ನು ಕನ್ನಡದಲ್ಲಿ ರಚಿತ ರಾಮ್ ಮಾಡುತ್ತಿದ್ದು, ‘ಪಂಕಜ ಕಸ್ತೂರಿ’ ಎಂಬ ಟೈಟಲ್ನಲ್ಲಿ ಈ ಚಿತ್ರ ಮೂಡಿ ಬರಲಿದೆ ಎಂದು ತಿಳಿದುಬಂದಿದೆ.
ನಿರ್ದೇಶಕ ಮಯೂರ ರಾಘವೇಂದ್ರ ಪ್ರತಿಕ್ರಿಯಿಸಿದ್ದು, ಈ ಚಿತ್ರ ರಿಮೇಕ್ ಆಗುತ್ತಿರುವುದು ಮತ್ತು ರಚಿತಾ ನಟಿಸುತ್ತಿರುವುದು ನಿಜ. ಟೈಟಲ್ ಫೈನಲ್ ಅಗಿಲ್ಲ. ಅಲ್ಲದೆ ಚಿತ್ರ ಟೇಕ್ಆಪ್ ಆಗಲು ಇನ್ನೂ ಎರಡು ತಿಂಗಳು ಆಗುತ್ತೆ. ಯೋಗಿ ಬಾಬು ಪಾತ್ರಕ್ಕೆ ನಮ್ಮಲ್ಲಿ ಯಾರು ಸೂಟ್ ಆಗ್ತಾರೆ ಎಂಬುದರ ಚರ್ಚೆ ನಡೆಯುತ್ತಿದೆ. ಒಂದು ವೇಳೆ ಪಾತ್ರಕ್ಕೆ ಹೊಂದುವ ನಟ ಸಿಗದಿದ್ದರೆ ಯೋಗಿ ಬಾಬು ಅವರನ್ನೇ ಕನ್ನಡಕ್ಕೆ ಕರೆತರುವ ಆಲೋಚನೆ ಇದೆ. ಆದರೆ ಯಾವುದೂ ಅಧಿಕೃತವಾಗಿಲ್ಲ. ಶೀಘ್ರದಲ್ಲೇ ಎಲ್ಲವನ್ನೂ ಫೈನಲ್ ಮಾಡಿ ಅನೌನ್ಸ್ ಮಾಡುವುದಾಗಿ ತಿಳಿಸಿದ್ದಾರೆ.