ಕನ್ನಡ ಚಿತ್ರರಂಗದ ಕಣ್ಮಣಿ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಕಾಲಿಕ ನಿಧನ ಇಡೀ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಆಘಾತ ಉಂಟು ಮಾಡಿದೆ. ದೇಶದ ಪ್ರಧಾನಿಯಿಂದ ಹಿಡಿದು ಭಾರತೀಯ ಚಿತ್ರರಂಗದ ಎಲ್ಲಾ ತಾರೆಯರು ಈ 'ಯುವರತ್ನ'ನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ಅಭಿಮಾನಿಗಳ ಪ್ರೀತಿಯ ಅಪ್ಪು, ತೆರೆ ಮೇಲೆ ಅಷ್ಟೇ ಹೀರೋ ಆಗಿರಲಿಲ್ಲ. ಬದಲಾಗಿ ನಿಜ ಜೀವನದಲ್ಲಿಯೂ ಹೀರೋ ಎನಿಸಿಕೊಂಡಿದ್ದರು. ಪವರ್ ಸ್ಟಾರ್ ತೆರೆಮರೆಯಲ್ಲಿ ಎಲ್ಲರೂ ಹೆಮ್ಮೆಪಡುವಂತ ಕೆಲಸ ಮಾಡಿದ್ದಾರೆ. ಈ 'ರಾಜಕುಮಾರ' ಮಾಡಿರುವ ಸಮಾಜಮುಖಿ ಕೆಲಸಗಳು ಅದೆಷ್ಟೋ ಜನಕ್ಕೆ ಗೊತ್ತಿಲ್ಲ.
ಸದ್ಯ ಪುನೀತ್ ರಾಜ್‍ಕುಮಾರ್
- 26 ಅನಾಥಾಶ್ರಮಗಳು
- 25 ವೃದ್ಧಾಶ್ರಮಗಳು
- 1800 ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಆದರೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇಯಿದ್ದರೂ, ಪುನೀತ್ ರಾಜ್‍ಕುಮಾರ್ ತಮ್ಮ ಸ್ವಂತ ದುಡಿಮೆಯಲ್ಲಿ ಸಾಕಷ್ಟು ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ ಹಾಗು ಸಮಾಜಮುಖಿ ಕೆಲಸವನ್ನ ಮಾಡಿದ್ದಾರೆ.
ಹೆಸರಿಗೆ ತಕ್ಕಂತೆ ಪವರ್ ಸ್ಟಾರ್
ಕನ್ನಡ ಚಿತ್ರರಂಗ ಕಂಡ ಈ ಬೆಟ್ಟದ ಹೂವು. ಈ ಹೆಸರಿಗೆ ತಕ್ಕಂತೆ ಪವರ್ ಸ್ಟಾರ್ ತೂಕದ ವ್ಯಕ್ತಿ. ಸಿನಿಮಾ, ರಿಯಾಲಿಟಿ ಶೋ ಹಾಗು ಜಾಹೀರಾತು, ಸಿನಿಮಾ ನಿರ್ಮಾಣ ಅಂತಾ ಬ್ಯುಸಿಯಾಗಿದ್ದ ಪವರ್ ಸ್ಟಾರ್, ಕೋಟ್ಯಂತರ ಅಭಿಮಾನಿಗಳು ಹೆಮ್ಮೆ ಪಡುವ ಸಮಾಜ ಮುಖಿ ಕೆಲಸಗಳನ್ನ ಮಾಡುತ್ತಿದ್ದರು.
ಬಡ ಕಲಾವಿದರಿಗೆ, ಅಭಿಮಾನಿಗಳಿಗೆ ಸಹಾಯ
ಗಾಂಧಿನಗರದಲ್ಲಿ ಡಾ. ರಾಜ್ ಕುಟುಂಬಕ್ಕೆ ದೊಡ್ಮನೆ ಅಂತಾ ಕರೆಯಲು ಪುನೀತ್ ರಾಜ್‍ಕುಮಾರ್ ಮಾಡುತ್ತಿದ್ದ ಸಮಾಜಮುಖಿ ಕೆಲಸಗಳೇ ಸಾಕ್ಷಿ. ತಂದೆಯಂತೆ ಪುನೀತ್ ಒಂದು ಸಿನಿಮಾಕ್ಕೆ ಹಾಡುವ ಹಾಡಿನಿಂದ ಬರುವ ಸಂಭಾವನೆ ಮೈಸೂರಿನಲ್ಲಿರುವ ಶಕ್ತಿಧಾಮಕ್ಕೆ ಹೋಗುತ್ತಿತ್ತು. ಅದೇ ರೀತಿ ಜಾಹೀರಾತಿನಿಂದ ಬರುವ ಹಣವನ್ನ ಕೆಲವು ಅನಾಥ ಆಶ್ರಮಗಳು ಹಾಗು ಕನ್ನಡ ಚಿತ್ರರಂಗದಲ್ಲಿ ಕಷ್ಟ ಅಂತಾ ಬರುವ ಬಡ ಕಲಾವಿದರಿಗೆ ಮತ್ತು ಅಭಿಮಾನಿಗಳಿಗೆ ನೀಡುತ್ತಿದ್ದರಂತೆ. ಆದರೆ ಈ ವಿಚಾರ ಅದೆಷ್ಟೋ ಜನರಿಗೆ ಗೊತ್ತಿಲ್ಲ.
ಕೆಲಸಗಾರರನ್ನ ಗೌರವದಿಂದ ಕಾಣುತ್ತಿದ್ದ ರಾಜರತ್ನ
ಇದರ ಜತೆಗೆ ಪುನೀತ್ ರಾಜ್‍ಕುಮಾರ್ ಮನೆಯಲ್ಲಿ ಹಾಗು ಪಿಆರ್ಕೆ ಸಂಸ್ಥೆಯಲ್ಲಿ ಕೆಲಸ ಮಾಡುವ, ಪ್ರತಿಯೊಬ್ಬ ಕೆಲಸಗಾರರನ್ನ ಬಹಳ ಗೌರವದಿಂದ ಕಾಣುತ್ತಿದ್ರಂತೆ. ಈ ಮಾತಿಗೆ ಪೂರಕವಾಗಿ ಪುನೀತ್ ರಾಜ್‍ಕುಮಾರ್ ಅವರೊಂದಿಗೆ ಕಳೆದ 35 ವರ್ಷಗಳಿಂದ ಇರುವ ಕೆಲಸಗಾರನ, ಮಗಳ ಶಿಕ್ಷಣ, ಮನೆಯ ಅಭಿವೃದ್ಧಿಗೆ ಪುನೀತ್ ಸಹಾಯ ಮಾಡ್ತಾ ಇದ್ದರು ಎಂಬುದು ಪುನೀತ್ ಕಚೇರಿಯಲ್ಲಿರುವ ಕೆಲಸಗಾರನ ಮಾತು.
ಸಂಭಾವನೆ ಪಡೆಯದೆ ಜಾಹೀರಾತಿನಲ್ಲಿ ನಟನೆ
ಸರ್ಕಾರದಿಂದ, ಸಾರ್ವಜನಿಕರಿಗೆ ಒಳಿತಾಗುವ ಜಾಹೀರಾತುಗಳಲ್ಲಿ ಪುನೀತ್ ರಾಜ್‍ಕುಮಾರ್ ಒಂದು ರೂಪಾಯಿ ಸಂಭಾವನೆ ಪಡೆಯದೆ, ಹಲವಾರು ಜಾಹೀರಾತುಗಳನ್ನ ಮಾಡಿಕೊಟ್ಟಿದ್ದಾರೆ. ಹೀಗೆ ಡಾ.ರಾಜ್‍ಕುಮಾರ್ ಆದರ್ಶವನ್ನ ಪಾಲಿಸುತ್ತಿದ್ದ ದೊಡ್ಮನೆ ಮಗ ಸಾಕಷ್ಟು ಜನರು ಮೆಚ್ಚುವ ಕೆಲಸ ಮಾಡಿದ್ದಾರೆ. ಆದ್ರೆ ಬಲಗೈನಲ್ಲಿ ಕೊಟ್ಟಿರುವುದು ಎಡಗೈಗೆ ಗೊತ್ತಾಗಬಾರಾದು ಅನ್ನೋದು ಈ 'ರಾಜಕುಮಾರ'ನ ಸಿದ್ದಾಂತ.
ಇದನ್ನೂ ಓದಿ: ಅಣ್ಣಾವ್ರ ತಂಗಿಗೆ ಪುನೀತ್ ಅಚ್ಚುಮೆಚ್ಚು: ಪ್ರೀತಿಯ ಸೋದರತ್ತೆಗೆ ತಿಳಿದಿಲ್ಲ ಅಪ್ಪು ಅಗಲಿಕೆ ವಿಚಾರ