ಬೆಂಗಳೂರು: ದಿ.ಪುನೀತ್ ರಾಜ್ಕುಮಾರ್ (Puneeth Rajkumar) ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಕನ್ನಡ ಚಿತ್ರರಂಗವಲ್ಲದೇ ದಕ್ಷಿಣ ಭಾರತದ ಚಿತ್ರರಂಗದ ಗಣ್ಯಾತಿಗಣ್ಯರು ನಗರದ ಪ್ಯಾಲೇಸ್ ಮೈದಾನದಲ್ಲಿ ನೆರೆದಿದ್ದರು.
ಈ ಕಾರ್ಯಕ್ರಮದಲ್ಲಿ ಅತ್ಯಂತ ಭಾವುಕರಾಗಿ ಮಾತನಾಡಿದ ಪುನೀತ್ ರಾಜ್ಕುಮಾರ್ ಸಹೋದರ ರಾಘವೇಂದ್ರ ರಾಜ್ಕುಮಾರ್, ತಮ್ಮನನ್ನು ಕಳೆದುಕೊಂಡ ನೋವು ತಡೆದುಕೊಳ್ಳಲಾರದೇ ಕಣ್ಣೀರು ಸುರಿಸಿದರು.
'ಕಳೆದ 20 ದಿನಗಳಿಂದ ನೊಂದು, ನೋವು ತಡೆದು, ನುಂಗಿಕೊಂಡು ಏನಾಯ್ತಪ್ಪಾ ಎಂದು ಮೆಲುಕು ಹಾಕಿದ್ರೆ ಒಬ್ಬ ತಮ್ಮ, ನಮಗೆ ಆತ ಪವರ್. ಆ ಪವರ್ ಹೋದ ಮೇಲೆ ಇನ್ನು ನಾವು ಬಲ್ಬ್ ಏನ್ ಮಾಡುವುದಕ್ಕೆ ಆಗುತ್ತೆ ಎಂದು ಅಂದುಕೊಂಡೆವು. ಆದರೆ, ಅವನು ಮಲಗಿಕೊಂಡ ದಿನ ಆತನ ಸುತ್ತಮುತ್ತ ರಾಜ್ಯದ ಮೂರು ಶಕ್ತಿಗಳಿದ್ದವು. ಪೊಲೀಸ್, ಸರ್ಕಾರ ಹಾಗೂ ಅಭಿಮಾನಿಗಳೇ ಅವರು. ಈ ನೋವನ್ನು ನಮ್ಮ ತಂದೆ-ತಾಯಿ ಮುಂದೆ ಹೇಳಿಕೊಳ್ಳೋಣ ಅಂದರೆ ಅವರನ್ನು ತೆಗೆದುಕೊಂಡು ಹೋಗಿ ಅಲ್ಲೇ ಮಲಗಿಸಿಬಿಟ್ಟಿದ್ದೇವೆ. ಈ ಸಂದರ್ಭದಲ್ಲಿ ನಾನು ಶಿವಣ್ಣನ ಮುಖ ನೋಡಿದೆ. ಈ ವೇಳೆ ನಮಗೆ ನಾಚಿಕೆಯಾಯಿತು. ನಾವಿಬ್ಬರೂ ಸೇರಿ ಇವನನ್ನು ಕಳಿಸಿಕೊಡಬೇಕೇ? ಎಂಬ ಕೊರಗು ಪ್ರತಿದಿನ ಕಾಡುತ್ತಿದೆ' ಎಂದು ಭಾವುಕರಾದರು. ಸಹೋದರನ ಮಾತುಗಳನ್ನು ಕೇಳಿ ನಟ ಶಿವರಾಜ್ ಕುಮಾರ್ ಕೂಡ ಕಣ್ಣೀರು ಸುರಿಸಿದರು.
ಮುಂದುವರೆದು ಮಾತನಾಡಿದ ರಾಘಣ್ಣ, 'ನೀವೆಲ್ಲರೂ ಸೇರಿ ನನಗೊಂದು ಸಹಾಯ ಮಾಡಿ. ಹೇಗಾದರೂ ಮಾಡಿ ನನ್ನ ಕಳಿಸಿ, ಅವನನ್ನು ಕರೆಯಿಸಿಕೊಂಡು ಬಿಡಿ, ನಾನು ಇರುವುದಿಲ್ಲ ಎಂದರು. ಇದೇ ವೇಳೆ ನಾವು ಪುನೀತ್ನನ್ನು ಹೂತಿಲ್ಲ, ಬಿತ್ತಿದ್ದೇವೆ. ನೂರಾರು ಪುನೀತರು ಹುಟ್ಟಿ ಬರುತ್ತಾರೆ' ಎಂದು ಉಮ್ಮಳಿಸಿ ಬರುತ್ತಿದ್ದ ದು:ಖದಿಂದಲೇ ಹೇಳಿದರು.