ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ವರ್ಷದ ಆರಂಭದಲ್ಲೇ ಅಭಿಮಾನಿಗಳಿಗೆ ಸಂತೋಷದ ಸುದ್ದಿ ನೀಡಿದ್ದಾರೆ. ತಮ್ಮ 'ಯುವರತ್ನ' ಸಿನಿಮಾದ ಬಗ್ಗೆ ಪುನೀತ್ ಅಪ್ಡೇಟ್ ನೀಡಿದ್ದಾರೆ. ಇದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಾಗುವಂತೆ ಮಾಡಿದೆ.
ಈಗಾಗಲೇ 'ಯುವರತ್ನ' ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದ್ದಿದ್ದು ಇತ್ತೀಚೆಗಷ್ಟೇ ಒಂದು ಹಾಡಿನ ಚಿತ್ರೀಕರಣ ಕೂಡಾ ಮುಗಿದಿದೆ. ಇನ್ನೂ ಮೂರು ಹಾಡುಗಳ ಶೂಟಿಂಗ್ ಬಾಕಿ ಇದೆ. ಆ ಹಾಡುಗಳ ಚಿತ್ರೀಕರಣ ಮುಗಿದರೆ 'ಯುವರತ್ನ' ಚಿತ್ರೀಕರಣ ಮುಗಿಯಲಿದೆ ಎಂದು ಪುನೀತ್ ಚಿತ್ರದ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ಬಲ್ಲ ಮೂಲಗಳ ಪ್ರಕಾರ 'ಯುವರತ್ನ' ಚಿತ್ರವನ್ನು ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಂಡಿದೆ ಎನ್ನಲಾಗಿದೆ.
ಇವೆಲ್ಲದರ ಜೊತೆಗೆ ಮತ್ತೊಂದು ಸರ್ಪ್ರೈಸ್ ಎಂದರೆ ಈ ವರ್ಷ ಪಿಆರ್ ಕೆ ಪ್ರೊಡಕ್ಷನ್ ಬ್ಯಾನರ್ನಲ್ಲಿ ನಿರ್ಮಾಣವಾಗುತ್ತಿರುವ ಮೂರು ಚಿತ್ರಗಳು ರಿಲೀಸ್ ಆಗಲಿವೆ ಎಂದು ಅಪ್ಪು ಹೇಳಿದ್ದಾರೆ. 'ಮಾಯಾಬಜಾರ್' ಸಿನಿಮಾ ಈಗಾಗಲೇ ಶೂಟಿಂಗ್ ಮುಗಿಸಿದೆ. 'ಲಾ' ಸಿನಿಮಾ ಈ ವರ್ಷವೇ ಬಿಡುಗಡೆಯಾಗಲಿದೆ. ಜೊತೆಗೆ ದಾನಿಶ್ ಸೇಠ್ ಅಭಿನಯದ ಪನ್ನಾಗಾಭರಣ ನಿರ್ದೇಶನದ ಚಿತ್ರ ಕೂಡಾ ಇದೇ ವರ್ಷ ತೆರೆಗೆ ಬರಲಿದೆ. ಈ ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಶೀಫ್ರದಲ್ಲೇ ಟೈಟಲ್ ಅನೌನ್ಸ್ ಮಾಡುವುದಾಗಿ ಪುನೀತ್ ಹೇಳಿದ್ದಾರೆ. ಪುನೀತ್ ರಾಜ್ಕುಮಾರ್ ತಮ್ಮದೇ ಪ್ರೊಡಕ್ಷನ್ ಸಂಸ್ಥೆ ಆರಂಭಿಸಿದಾಗಿನಿಂದ ತಮ್ಮ ಹೋಮ್ ಬ್ಯಾನರ್ನಲ್ಲಿ ಇನ್ನೂ ನಟಿಸಿಲ್ಲ. ಆದರೆ ಈ ವರ್ಷ ಅಪ್ಪು ಪಿಆರ್ಕೆ ಪ್ರೊಡಕ್ಷನ್ನಲ್ಲಿ ನಟಿಸಲಿದ್ದುಈ ಚಿತ್ರಕ್ಕೆ 'ರಾಮಾರಾಮರೇ' ಸತ್ಯ ಪ್ರಕಾಶ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.