ಕೊರೊನಾ ವೈರಸ್ ಭೀತಿಯಿಂದ ಕಳೆದ ಎರಡೂವರೆ ತಿಂಗಳಿಂದ ಜನರು ಮನೆಯಲ್ಲಿ ಉಳಿದಿದ್ದಾರೆ. ಸೆಲಬ್ರಿಟಿಗಳು ಕೂಡಾ ಶೂಟಿಂಗ್ ಇಲ್ಲದಿರುವುದರಿಂದ ಮನೆಯಲ್ಲಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಪುನೀತ್ ರಾಜ್ಕುಮಾರ್ ತಮ್ಮ ಅಭಿಮಾನಿಯೊಬ್ಬರ ಮದುವೆಯಲ್ಲಿ ಭಾಗಿಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಅಭಿಮಾನಿಗಳಿಗೆ ಡಾ. ರಾಜ್ಕುಮಾರ್ ಕುಟುಂಬ ಎಂದರೆ ಇನ್ನಿಲ್ಲದ ಪ್ರೀತಿ. ಅದೇ ರೀತಿ ನಟಸಾರ್ವಭೌಮನ ಕುಟುಂಬ ಕೂಡಾ ಅಭಿಮಾನಿಗಳಿಗೆ ಅಷ್ಟೇ ಗೌರವ ನೀಡುತ್ತಾರೆ. ಪುನೀತ್ ರಾಜ್ಕುಮಾರ್ ಕೂಡಾ ಅಭಿಮಾನಿಗಳ ಪ್ರೀತಿಯ ಕರೆಗೆ ಓಗೊಟ್ಟು ಶುಭ ಸಮಾರಂಭ ಅಥವಾ ಬೇರೆ ಏನೇ ಆಗಲಿ ಒಂದು ಹೆಜ್ಜೆ ಹೋಗಿ ಬರುತ್ತಾರೆ. ಇದೀಗ ಅಪ್ಪು ತಮ್ಮ ಅಭಿಮಾನಿಯ ಪ್ರೀತಿಯ ಆಹ್ವಾನಕ್ಕೆ ಇಲ್ಲ ಎನ್ನದೆ ಅವರ ಮದುವೆಗೆ ಹೋಗಿ ಬಂದಿದ್ದಾರೆ.
ಬೆಂಗಳೂರು ಮಹಾಲಕ್ಷ್ಮಿ ಲೇ ಔಟ್ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಅಭಿಮಾನಿ ಮುರಳಿ ಮದುವೆಗೆ ಕೊರೊನಾ ಭೀತಿ ನಡುವೆಯೂ ಪುನೀತ್ ರಾಜ್ಕುಮಾರ್ ತೆರಳಿ ನೂತನ ವಧು-ವರರಿಗೆ ಶುಭ ಹಾರೈಸಿ ಬಂದಿದ್ದಾರೆ. ಮುರಳಿ ಸುಮಾರು 20 ವರ್ಷಗಳಿಂದ ಅಣ್ಣಾವ್ರ ಕುಟುಂಬಕ್ಕೆ ಅಭಿಮಾನಿಯಾಗಿದ್ದಾರೆ. ಪುನೀತ್ ನೋಡುತ್ತಿದ್ದಂತೆ ಅಭಿಮಾನಿಗಳು ಅವರೊಂದಿಗೆ ಸೆಲ್ಫಿಗೆ ಮುಗಿಬಿದ್ದರು. ತಾಳ್ಮೆಯಿಂದಲೇ ಅಪ್ಪು ಎಲ್ಲರೊಂದಿಗೆ ಫೋಟೋ ತೆಗೆಸಿಕೊಂಡರು. ಪುನೀತ್ ಅವರ ಈ ಸರಳತೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.