ನಟ ದರ್ಶನ್ ಹುಟ್ಟು ಹಬ್ಬದ ಆಚರಣೆ ವೇಳೆ ಆಯೋಜಕರು ಹಾಗೂ ಅಭಿಮಾನಿಗಳು ದರ್ಶನ್ ಮನೆಯ ಸುತ್ತಮುತ್ತಲಿನ ಮನೆಯವರಿಗೆ ಕಿರಿಕಿರಿ ಮಾಡಿದ್ದಾರೆಂಬ ದೂರಿನ ಆಧಾರದ ಮೇಲೆ ರಾಜರಾಜೇಶ್ವರಿ ನಗರ ಪೊಲೀಸರು ಎನ್ಸಿಆರ್ ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ದರ್ಶನ್ ಮನೆಯ ಸುತ್ತ ಅಳವಡಿಸಿದ ಸಿಸಿಟಿವಿ ಫೂಟೇಜ್ ವಶಕ್ಕೆ ಪಡೆದು ಅಭಿಮಾನಿಗಳ ವರ್ತನೆಯ ದೃಶ್ಯವನ್ನ ಪರಿಶೀಲನೆ ಮಾಡ್ತಿದ್ದಾರೆ. ಹಾಗೆ ದರ್ಶನ್ ಹುಟ್ಟುಹಬ್ಬಕ್ಕೆಂದು ನಿಯೋಜಿಸಿದ್ದ ಪೊಲೀಸರ ಹೇಳಿಕೆಯನ್ನ ಕೂಡ ಪಡೆಯಲಿದ್ದಾರೆ.
ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಐಡಿಯಲ್ ಹೋಮ್ಸ್ ಲೇಔಟ್ನಲ್ಲಿ ಶನಿವಾರ ತಡ ರಾತ್ರಿ ದರ್ಶನ್ ಹುಟ್ಟು ಹಬ್ಬವನ್ನ ಭರ್ಜರಿಯಾಗಿ ಸಂಭ್ರಮಾಚರಣೆ ಮಾಡಲಾಗಿತ್ತು. ಇದೇ ವೇಳೆ ಅಭಿಮಾನಿಗಳ ಬಳಗ ಕುಡಿದು ಬಂದು ದರ್ಶನ್ ಮನೆಯ ಪಕ್ಕ ಇರುವ ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ ಮಾಡಿದ್ದಾರೆ ಎಂಬ ಆರೋಪವಿದೆ. ಮನೆಯ ಎದುರು ನಿಲ್ಲಿಸಿದ ಕಾರು ಜಖಂ ಆಗಿದೆ. ಮನೆಯ ಗೇಟ್ ಹತ್ತಿ ಒಳಗೆ ನುಗ್ಗಿ ಗಿಡಗಳನ್ನ ಕಿತ್ತು ಹಾಕಿದ್ದಾರೆ. ಮನೆಯ ಟೇರೆಸ್ ಮೇಲೆ ವಿಚಿತ್ರವಾಗಿ ವರ್ತಿಸಿದ್ದಾರೆಂದು ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಪೊಲೀಸರಿಗೆ ದೂರು ನೀಡಿದ್ದರು.