ಕೊರೊನಾ ಹಾವಳಿಗೆ ಸ್ತಬ್ಧ ಆಗಿದ್ದ ಚಿತ್ರಮಂದಿರಗಳು ಈಗ ಹೊಸ ಮೆರುಗಿನೊಂದಿಗೆ ಮತ್ತೆ ಕಾರ್ಯಾರಂಭ ಮಾಡಿವೆ. ಯಾವುದೇ ಹೊಸ ಸಿನಿಮಾಗಳು ಬಿಡುಗಡೆ ಆಗದಿದ್ರೂ ಲಾಕ್ಡೌನ್ಗೂ ಮುನ್ನ ಬಿಡುಗಡೆಯಾಗಿ ಕೆಲವೇ ದಿನಗಳು ಪ್ರದರ್ಶನಗೊಂಡ ಸಿನಿಮಾಗಳು ಮತ್ತೆ ಬಿಡುಗಡೆ ಆಗುತ್ತಿವೆ.
ಈ ವರ್ಷ ಪ್ರೇಕ್ಷಕರ ಮನಗೆದ್ದ ಅತ್ಯುತ್ತಮ ಚಿತ್ರಗಳಲ್ಲಿ 'ದಿಯಾ' ಕೂಡಾ ಒಂದು. ಈ ಸಿನಿಮಾ ಇಂದು ಮತ್ತೆ ಬಿಡುಗಡೆ ಆಗಿದೆ. ಖುಷಿ ರವಿ, ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ ಬಿಡುಗಡೆ ಆಗಿ ಕೆಲವು ದಿನಗಳ ನಂತರ ಲಾಕ್ಡೌನ್ ಜಾರಿ ಮಾಡಲಾಗಿತ್ತು. ನಂತರ ಒಟಿಟಿ ಪ್ಲಾಟ್‌ಫಾರ್ಮ್ ಮೂಲಕ ಈ ಚಿತ್ರ ಸಾಕಷ್ಟು ಜನರನ್ನು ತಲುಪಿತ್ತು. ಆದರೆ ಈ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡಬೇಕು ಎಂಬುದು ಹಲವರ ಆಸೆ ಆಗಿತ್ತು. ಹೀಗಾಗಿ ಅಭಿಮಾನಿಗಳ ಒತ್ತಾಯದ ಮೇರೆಗೆ ಚಿತ್ರತಂಡ ಮಲ್ಟಿಪ್ಲೆಕ್ಸ್ಗಳಲ್ಲಿ ಚಿತ್ರವನ್ನು ಇಂದು ರೀ ರಿಲೀಸ್ ಮಾಡುತ್ತಿದೆ.
'ದಿಯಾ' ಚಿತ್ರ ಮರು ಬಿಡುಗಡೆ ಆಗುತ್ತಿರುವುದಕ್ಕೆ ಪೃಥ್ವಿ ಅಂಬರ್ ಸಂತೋಷ ವ್ಯಕ್ತಪಡಿಸಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು, ದೊಡ್ಡ ಪರದೆಯಲ್ಲಿ ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ. ಈ ಚಿತ್ರದಲ್ಲಿ ಕ್ಲೈಮ್ಯಾಕ್ಸನ್ನು ಸ್ವಲ್ಪ ಬದಲಾವಣೆ ಮಾಡಲಾಗಿದೆಯಂತೆ. ಜೊತೆಗೆ ಈ ಸಿನಿಮಾ ಬಿಡುಗಡೆ ನಂತರ ಸೂಪರ್ ಹಿಟ್ ಆದ 'ದಿಯಾ' ಟೈಟಲ್ ಹಾಡನ್ನು ಹೊಸದಾಗಿ ಸೇರಿಸಲಾಗಿದೆ. ಮೊದಲು ಈ ಚಿತ್ರ ತೆರೆ ಕಂಡಾಗ ಅದರಲ್ಲಿ ಈ ಹಾಡು ಇರಲಿಲ್ಲ. ಸಂಜಿತ್ ಹೆಗಡೆ ಮತ್ತು ಚಿನ್ಮಯಿ ಶ್ರೀಪಾದ್ ಈ ಹಾಡನ್ನು ಹಾಡಿದ್ದಾರೆ. 'ದಿಯಾ' ಮತ್ತೆ ನಿಮಗೆಲ್ಲಾ ಹೊಸ ಅನುಭವ ನೀಡಲಿದೆ ಎಂದು ನಟ ಪೃಥ್ವಿ ಅಂಬರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.