ಬೆಂಗಳೂರು: ಸೈರಾ ನರಸಿಂಹ ರೆಡ್ಡಿ ಚಿತ್ರವನ್ನು ಪರಭಾಷೆಯಲ್ಲಿ ಬಿಡುಗಡೆ ಮಾಡದಂತೆ ಈ ಹಿಂದೆ ಕನ್ನಡಪರ ಹೋರಾಟಗಾರರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಸಲ್ಲಿಸಿದ್ದರು. ಅದರೆ, ವಾಣಿಜ್ಯ ಮಂಡಳಿ ಸಿನಿಮಾ ರಿಲೀಸ್ ವಿಚಾರವಾಗಿ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಅಕ್ರೋಶ ವ್ಯಕ್ತಪಡಿಸಿ ಕನ್ನಡ ಹೋರಾಟಗಾರ ನಾಗೇಶ್ ನೇತೃತ್ವದಲ್ಲಿ ಫಿಲ್ಮ್ ಚೇಂಬರ್ಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು.
ಐದು ಭಾಷೆಯಲ್ಲಿ ತೆರೆಗೆ ಬರುತ್ತಿರುವ ಸೈರಾ ನರಸಿಂಹ ರೆಡ್ಡಿ ಸಿನಿಮಾ ಕರ್ನಾಟಕದಲ್ಲಿ ಕನ್ನಡ ಸೆರಿದಂತೆ ಹಿಂದಿ, ತಮಿಳು, ತೆಲುಗಿನಲ್ಲೂ, ಬಿಡುಗಡೆಗೆ ಸಜ್ಜಾಗಿದ್ದು, ಕನ್ನಡದಲ್ಲಿ ಮಾತ್ರ ಸೈರಾ ನರಸಿಂಹ ರೆಡ್ಡಿ ಸಿನಿಮಾ ಬಿಡುಗಡೆ ಆಗಬೇಕೆಂದು ಕನ್ನಡಪರ ಹೋರಾಟಗಾರರು ಧರಣಿ ನಡೆಸಿದರು. ಅಲ್ಲದೇ ಬೇರೆ ಭಾಷೆಯಲ್ಲಿ ಬಿಡುಗಡೆ ಆದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಇದೇ ವೇಳೆ ಕನ್ನಡ ಪರ ಹೋರಾಟಗಾರರು ಫಿಲ್ಮ್ ಚೇಂಬರ್ ಅಧ್ಯಕ್ಷ ಡಿ ಆರ್ ಜಯರಾಜ್ ಅವರನ್ನು ತರಾಟೆಗೆ ತೆಗೆದುಕೊಂಡು, ಪರಭಾಷೆಯ ಸಿನಿಮಾ ಬಿಡುಗಡೆಗೆ ಅವಕಾಶ ಕೊಡ್ತಿರುವ ನಿಮಗೆ ನಾಚಿಗೆ ಆಗಲ್ವಾ. ಕನ್ನಡದಲ್ಲಿ ಕನ್ನಡ ಹೋರಾಟಗಾರನ ಕಥೆಯ ಸಿನಿಮಾ ಗೀತಾ ಬಿಡುಗಡೆ ಆಗಿದೆ. ಗೀತಾ ಚಿತ್ರ ಇರೋ ಸಿನಿಮಾ ಥಿಯೇಟರ್ಗಳಿಗೆ ಸೈರಾ ಸಿನಿಮಾ ಬಂದ್ರೆ ಕನ್ನಡದ ಕಥೆ ಏನು ಎಂದು ಗುಬ್ಬಿ ಜಯರಾಜ್ ಅವರಿಗೆ ಪ್ರಶ್ನೆ ಮಾಡಿದರು. ಫಿಲ್ಮ್ ಚೇಂಬರ್ಗೆ ಪರಭಾಷೆ ಸಿನಿಮಾಗಳನ್ನ ತಡೆಯೋಕೆ ಅಧಿಕಾರ ಇಲ್ವಂತೆ, ಅಧಿಕಾರ ಇಲ್ಲದಿದ್ರೆ ಫಿಲ್ಮ್ ಚೇಂಬರ್ಗೆ ಬೀಗ ಹಾಕೋದೆ ಒಳ್ಳೆಯದೆಂದು ಅಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಇದೇ ವೇಳೆ ಹೋರಾಟಗಾರರ ಮನವೋಲಿಸಲು ಯತ್ನಿಸಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್ ಪರಭಾಷೆ ಸಿನಿಮಾ ತಡೆಯೋಕೆ ನಮಗೆ ಅಧಿಕಾರ ಇಲ್ಲ. ಪರಭಾಷೆ ಸಿನಿಮಾ ತಡೆಯೋಕೆ ಹೋದ್ರೆ ನಮ್ಮ ಮೇಲೆ ಕೇಸ್ ಹಾಕ್ತಾರೆ. ಇಲ್ಲಿಯವರೆಗೂ ಫಿಲ್ಮ್ ಚೇಂಬರ್ ಮೇಲೆ 1 ಕೋಟಿ ರೂ. ದಂಡ ವಿಧಿಸಿದ್ದಾರೆ. ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾ ಮುಂದೆ ನಮ್ಮದೇನು ನಡೆಯೋಲ್ಲಾ, ನಾನು ಕೂಡ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಕನ್ನಡ ಸಿನಿಮಾ ಇರೋ ಥಿಯೇಟರ್ಗಳಲ್ಲಿ ಪರಭಾಷೆ ಸಿನಿಮಾಗಳಿಗೆ ಅವಕಾಶ ಕೊಡೋಲ್ಲಾ ಎಂಬ ಭರವಸೆ ನೀಡಿದರು.