ಕನ್ನಡ ಚಿತ್ರರಂಗದಲ್ಲಿ ಕಥೆಗಳ ಕೊರತೆ ಇದೆ ಎಂಬ ಕೂಗು ಇಂದು ನಿನ್ನೆಯದಲ್ಲ. ದಶಕಗಳ ಹಿಂದೆ ನಾದಬ್ರಹ್ಮ ಹಂಸಲೇಖ ‘ಕಥಾ ಕಣಜ’ವನ್ನು ಸ್ಥಾಪಿಸಿ ಅಲ್ಲಿ ಜಮೆ ಆಗಿದ್ದ ಕಥೆಗಳನ್ನು ಕನ್ನಡ ನಿರ್ಮಾಪಕರಿಗೆ ಕೊಡುವುದು ಎಂದು ತೀರ್ಮಾನಿಸಿದ್ದರು. ಅದು ಯಾಕೋ ಸರಿ ಹೋಗಲಿಲ್ಲ ಎಂದು ಕೆಲವು ದಿನಗಳ ನಂತರ ಹಂಸಲೇಖ ಹೇಳಿದ್ದರು.
ಇತ್ತೀಚಿಗೆ ‘ನಿಮ್ ಕಥೆ ನಾವ್ ಕೆಳ್ತೇವೆ‘ ಎಂಬ ಎಂಟರ್ಟೈನ್ಮೆಂಟ್ ವೇದಿಕೆ ಕೂಡಾ ಸ್ಥಾಪಿತವಾಯ್ತು. ಸಾವನ ಪ್ರಕಾಶನ ಅತ್ಯುತ್ತಮ ಹತ್ತು ಕತೆಗಳನ್ನು ಪುಸ್ತಕ ರೂಪದಲ್ಲಿ ತಂದು ಅತ್ಯುತ್ತಮ ಕಥೆಗೆ ಒಂದು ಲಕ್ಷ ರೂಪಾಯಿ ಎಂದು ತೀರ್ಮಾನಿಸಿತು. ಒಂದು ತಿಂಗಳ ಅವಧಿಯಲ್ಲಿ ಈ ಸಂಸ್ಥೆಗೆ 350 ಕಥೆಗಳು ಬಂದವು. ಅದರಲ್ಲಿ ಒಂದು ಕಥೆಯೂ ಆಯ್ಕೆ ಆಗಲಿಲ್ಲ. ನಂತರ ಸಾವನ ಪ್ರಕಾಶನ ಪುಸ್ತಕ ಮಾಡುವ ಯೋಜನೆಯನ್ನು ನಿಲ್ಲಿಸಿತು. ಈ ತಂಡದಲ್ಲಿ ನಿರ್ದೇಶಕ ಎಂ.ಜಿ.ಶ್ರೀನಿವಾಸ್, ಪತ್ರಕರ್ತ ಹಾಗೂ ಸಾಹಿತಿ ಜೋಗಿ, ಶ್ರುತಿ, ಲೂಸಿಯ ಪವನ್ ಕುಮಾರ್, ರಾಮ ರಾಮ ರೇ ಸತ್ಯಪ್ರಕಾಶ್, ಹರೀಶ್ ಮಲ್ಲಯ್ಯ ಕೂಡಾ ಇದ್ದರು.
ಇದೀಗ ಅದೇ ರೂಪದಲ್ಲಿ ನಿರ್ಮಾಪಕ ಕೆ.ಮಂಜು ಕೂಡಾ ಕಥೆಗಳ ಆಯ್ಕೆಗೆ ಒಂದು ವೇದಿಕೆ ಸಿದ್ಧ ಮಾಡಿದ್ದಾರೆ. ಆಯ್ಕೆ ಆದ ಕಥೆಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲು ನಿರ್ಮಾಪಕ ಕೆ.ಮಂಜು ಮುಂದಾಗಿದ್ದಾರೆ. ಇದನ್ನು ಆಯ್ಕೆ ಮಾಡುವುದಕ್ಕೆ ಓದು ತಂಡ ಕೂಡಾ ಮಾಡಿದ್ದಾರೆ. ಜುಲೈ 15 ಒಳಗೆ ಕಥೆಗಳು ಕೆ.ಮಂಜು ಕಚೇರಿ ಸೇರಬೇಕು. ಇದು ಸ್ವಂತ ಕಥೆ ಆಗಿರಬೇಕು ಎಂದು ಕೆ. ಮಂಜು ಹೇಳಿದ್ದಾರೆ. ಕೆ.ಮಂಜು ಐಡಿಯಾ ನಕಲು ಆದರೆ ಕೇಳುವ ಕಥೆ ಮಾತ್ರ ಸ್ವಂತದ್ದಾಗಿರಬೇಕಾ..? ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ.