ಇದೀಗ ಎಲ್ಲೆಡೆ ನಾಡಹಬ್ಬ ದಸರಾ ಸಂಭ್ರಮ. ಕಿರುತೆರೆ ವಾಹಿನಿಗಳು ಕೂಡಾ ಇದಕ್ಕೆ ಹೊರತಾಗಿಲ್ಲ. ದಸರಾ ಸಂಭ್ರಮಕ್ಕಾಗಿ ಹಲವು ಕಾರ್ಯಕ್ರಮಗಳನ್ನು ವಾಹಿನಿಗಳು ಈಗಾಗಲೇ ವೀಕ್ಷಕರಿಗಾಗಿ ಪ್ರಸಾರ ಮಾಡುತ್ತಿವೆ. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ವಾಹಿನಿಗಳು ಮನೆಬಾಗಿಲಿಗೆ ದೇವಿ ದರುಶನ ಮಾಡಿಸುತ್ತಿವೆ. ಕಲರ್ಸ್ ಕನ್ನಡ ವಾಹಿನಿಯು ನವಶಕ್ತಿ ವೈಭವ ಕಾರ್ಯಕ್ರಮದ ಮೂಲಕ ಕಿರುತೆರೆ ವೀಕ್ಷಕರಿಗೆ ದೇವಿ ದರುಶನ ಮಾಡಿಸುತ್ತಿದೆ.
ಇದರ ಜೊತೆಗೆ ಮಂಗಳಗೌರಿ ಮದುವೆ ಧಾರಾವಾಹಿಯ ಮಹಾಸಂಚಿಕೆಯು ಕೂಡಾ ದಸರಾ ಹಬ್ಬದ ಪ್ರಯುಕ್ತ ಪ್ರಸಾರ ಕಾಣಲಿದ್ದು ಬಹಳ ಕುತೂಹಲದಿಂದ ಕೂಡಿದೆ. ಇಂದು ರಾತ್ರಿ ಮಂಗಳಗೌರಿ ಮದುವೆಯ ಮಹಾಸಂಚಿಕೆ ಪ್ರಸಾರವಾಗಲಿದ್ದು ಅದರಲ್ಲಿ ಪ್ರಿಯಾಂಕ ಉಪೇಂದ್ರ ನಟಿಸಲಿದ್ದಾರೆ.
ಧಾರಾವಾಹಿಯಲ್ಲಿ ಕಿಡ್ನ್ಯಾಪ್ ಆಗಿರುವ ಪ್ರಿಯಾಂಕರನ್ನು ಕಾಪಾಡಲು ಮಂಗಳಗೌರಿ ಧಾವಿಸಿ ಬರುತ್ತಾಳೆ. ಇತ್ತ ನಾಯಕನೂ ಈ ವಿಚಾರ ತಿಳಿದು ಆತಂಕಗೊಳ್ಳುತ್ತಾನೆ. ಕೊನೆಯಲ್ಲಿ ರೌಡಿಗಳಿಂದ ಪ್ರಿಯಾಂಕ ಅವರನ್ನು ಕಾಪಾಡಲು ಮಂಗಳಗೌರಿ ದೇವಿಯ ರೂಪ ತಾಳುತ್ತಾಳೆ. ಅಂತೂ ರೋಚಕವಾಗಿರುವ ಈ ಸಂಚಿಕೆಗಳನ್ನು ನೋಡಲು ಮರೆಯದಿರಿ.