ಕೊರೊನಾ ಎರಡನೇ ಅಲೆಯಿಂದ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಪ್ರದರ್ಶನ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಅದರಲ್ಲೂ ಸಿನಿಮಾ ಪ್ರೇಕ್ಷಕರು, ಮನೆಯಲ್ಲೇ ಸಿನಿಮಾ ನೋಡುವುದು ರೂಢಿಯಾಗಿತ್ತು. ಇಂತಹ ಸಮಯದಲ್ಲಿ ಮ್ಯೂಸಿಕ್ ಲವ್ ಸ್ಟೋರಿ ಹೊಂದಿರುವ ಪ್ರೇಮಂ ಪೂಜ್ಯಂ ಸಿನಿಮಾ (Premam Poojyam), ಸಿನಿಮಾ ಪ್ರಿಯರನ್ನ ಚಿತ್ರಮಂದಿರಗಳಿಗೆ ಬರುವಂತೆ ಮಾಡಿದೆ.
ಲವ್ಲೀ ಸ್ಟಾರ್ ಪ್ರೇಮ್ (Lovely star Prem) ತಮ್ಮ ಸಿನಿಮಾ ಬದುಕಿನಲ್ಲಿ 25ನೇ ಸಿನಿಮಾ ಅಂತಾ ಕರೆಯಿಸಿಕೊಂಡಿರುವ ಪ್ರೇಮಂ ಪೂಜ್ಯಂ, ತೆರೆಕಂಡು ರಾಜ್ಯದ ಎಲ್ಲ ಚಿತ್ರಮಂದಿರಗಳ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಪ್ರೇಮಂ ಪೂಜ್ಯಂ ಬಿಡುಗಡೆಯಾದ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಲವ್ಲೀ ಸ್ಟಾರ್ ಪ್ರೇಮ್ ಮುದ್ದಾದ ನಿಷ್ಕಲ್ಮಶ ಪ್ರೇಮ ಕಾವ್ಯಕ್ಕೆ ಸಿನಿಮಾ ಪ್ರಿಯರು ಮನ ಸೋತಿದ್ದಾರೆ. ಪ್ರೇಮಂ ಪೂಜ್ಯಂ ಚಿತ್ರ ಪ್ರೇಮಿಗಳ ಕಥೆ ಅನ್ನೋದಕ್ಕಿಂತ ಹೆಚ್ಚಾಗಿ, ಒಬ್ಬ ಹುಚ್ಚು ಪ್ರೇಮಿಯ ಕಥೆ. ಈ ಚಿತ್ರದಲ್ಲಿ ಅಕ್ಷರಶಃ ಪ್ರೇಮ್ ತಾನು ಇಷ್ಟ ಪಟ್ಟ ಹುಡುಗಿಯನ್ನ ಏಂಜಲ್ಗೆ ಹೋಲಿಸುವ ಪ್ರೀತಿಯ ಆರಾಧಕ. ಡಾಕ್ಟರ್ ಹರಿ ಪಾತ್ರದಲ್ಲಿ ನೋಡುಗರ ಮನಸಿಗೆ ಇಷ್ಟ ಆಗುವ ಪಾತ್ರದಲ್ಲಿ ಲವ್ಲೀ ಸ್ಟಾರ್ ಪ್ರೇಮ್ ಅಭಿನಯಿಸಿದ್ದಾರೆ.
ನಿರ್ದೇಶಕ ರಾಘವೇಂದ್ರರಿಂದ ವಿಭಿನ್ನ ಪ್ರಯತ್ನ
ಇನ್ನು ಸಹಜವಾಗಿ ಲವ್ ಸ್ಟೋರಿ ಸಿನಿಮಾಗಳಲ್ಲಿ ಹೀರೋಗೆ, ನಾಯಕಿ ಸಿಗಲಿಲ್ಲ ಅಂದರೆ, ಮಾನಸಿಕ ಖಿನ್ನತೆ, ಹುಚ್ಚನಾಗಿ ಹಾಗೂ ಕುಡಿತ ಸೇರಿದಂತೆ ಅನೇಕ ಚಟಗಳಿಗೆ ದಾಸನಾಗಿ ಜೀವನವನ್ನ ಹಾಳು ಮಾಡಿಕೊಳ್ಳಿವ ಅದೆಷ್ಟೋ ಕಥೆಗಳನ್ನ ನೋಡಿದ್ದೀವಿ. ಆದರೆ ಪ್ರೇಮ್ ಪಾತ್ರವನ್ನು ವೈದ್ಯನಾಗಿರೋ ನಿರ್ದೇಶಕ ರಾಘವೇಂದ್ರ ಬಿ.ಎಸ್ (Director Raghavendra B.S) ಬಹಳ ವಿಭಿನ್ನವಾಗಿ ತೋರಿಸಿರೋದು ಸಿನಿಮಾ ಪ್ರಿಯರಿಗೆ ಇಷ್ಟ ಆಗಿದೆ.
ಹೀಗಾಗಿ ಪ್ರೇಮಂ ಪೂಜ್ಯಂ ಸಿನಿಮಾ ಬಿಡುಗಡೆ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ಸಂತೋಷನ್ನು ನಟ ಪ್ರೇಮ್, ನಿರ್ದೇಶಕ ರಾಘವೇಂದ್ರ ಬಿ.ಎಸ್ ಹಾಗೂ ಕಾರ್ಯಕಾರಿ ನಿರ್ಮಾಪಕ ಮಾಧವ್ ಕ್ರೀನಿ ಹಂಚಿಕೊಂಡಿದ್ದಾರೆ.
ಯಶಸ್ವಿ ಪ್ರದರ್ಶನಕ್ಕೆ ಸಂತಸ
ನಿರ್ದೇಶಕ ರಾಘವೇಂದ್ರ ಮಾತನಾಡಿ, ತೆರೆಕಂಡ ಎಲ್ಲಾ ಜಿಲ್ಲೆಗಳಲ್ಲಿ ಯಶಸ್ವಿ ಪ್ರದರ್ಶನ ಆಗುತ್ತಿದೆ. ಅದರಲ್ಲಿ ಫ್ಯಾಮಿಲಿ ಸಮೇತ ಬಂದು ನಮ್ಮ ಪ್ರೇಮಂ ಪೂಜ್ಯಂ ಸಿನಿಮಾ ನೋಡುತ್ತಿದ್ದಾರೆ. ವಯಸ್ಸಾದ ಅಜ್ಜಿಯೊಬ್ಬರು ಮಂಗಳೂರಿನಲ್ಲಿ ಸಿನಿಮಾ ನೋಡಿದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ನಮ್ಮ ಕನ್ನಡ ಸಿನಿಮಾ, ಯಾವ ಭಾಷೆಗೆ ಕಡಿಮೆ ಇಲ್ಲ ಅನ್ನೋದನ್ನು ಈ ಸಿನಿಮಾ ನಿಜ ಮಾಡಿದೆ. ಇನ್ನು ಶ್ರೀಹರಿ ತರ ಹುಡುಗ ಬೇಕು ಅಂತಾ ಸಾಕಷ್ಟು ಹುಡುಗಿಯರು ಮಾತನಾಡಿದ್ದನ್ನು, ನೋಡಿ ಖುಷಿಯಾಯಿತು ಎಂದಿದ್ದಾರೆ.
ಪ್ರೇಮ್ ಫಸ್ಟ್ ಡೇ ಅಭಿಮಾನಿಗಳ ಜೊತೆ ಸಿನಿಮಾ ನೋಡಬೇಕೆಂದರೆ ತುಂಬಾನೇ ಟೆನ್ಶನ್ ಆಗಿದ್ರಂತೆ. ಇನ್ನು ಪ್ರೇಮ್ ತಮ್ಮ 25ನೇ ಸಿನಿಮಾ ಆಗಿದ್ದರಿಂದ ಪ್ರೇಮಂ ಪೂಜ್ಯಂ ಸಿನಿಮಾಗಿಂತ ಮುಂಚೆ 80 ಕತೆಗಳನ್ನ ಕೇಳಿದ್ದೆ ಎಂದರು. ಕಾರ್ಯಕಾರಿ ನಿರ್ಮಾಪಕ ಮಾಧವ್ ಕ್ರೀನಿ ಮಾತನಾಡಿ, ಸಿನಿಮಾದಲ್ಲಿರುವ ಮೆಸೇಜ್ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಿದೆ ಎಂದರು.
ಇದನ್ನೂ ಓದಿ: ಕೆಸರು ರಸ್ತೆಯಲ್ಲಿ ಭತ್ತ ನಾಟಿ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಂಚೀಪುರ ನಿವಾಸಿಗಳ ಆಕ್ರೋಶ