‘ಅಧ್ಯಕ್ಷ ಇನ್ ಅಮೆರಿಕ’
ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆದ ‘ಟೂ ಕಂಟ್ರೀಸ್’ ಕಥೆಯ ಎಳೆಯನ್ನು ಇಟ್ಟುಕೊಂಡು ಸಂಭಾಷಣೆಗಾರ ಯೋಗಾನಂದ್ ಮುದ್ದಾನ್ ಈ ಸಿನಿಮಾ ನಿರ್ದೇಶಿಸಿದ್ದಾರೆ. ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾ. ತೆಲುಗು ಭಾಷೆಯಲ್ಲಿ ಅನೇಕ ಸಿನಿಮಾಗಳನ್ನು ನಿರ್ಮಿಸಿರುವ ಎನ್ಆರ್ಐ ವಿಶ್ವಪ್ರಸಾದ್ ಟಿ.ಜಿ ಹಾಗೂ ವಿವೇಕ್ ಕುಚಿಬೋಟ್ಲ ಈ ಚಿತ್ರದ ಸಹ ನಿರ್ಮಾಪಕರು. ಚಿತ್ರದಲ್ಲಿ ಶರಣ್ ಹಾಗೂ ರಾಗಿಣಿ ದ್ವಿವೇದಿ ಜೊತೆಯಾಗಿ ನಟಿಸಿದ್ದಾರೆ. ಚಿತ್ರದ ಬಹುತೇಕ ಭಾಗ ಅಮೆರಿಕದ ಸಿಯಾಟಲ್ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಯೋಗಾನಂದ್ ಮುದ್ದಾನ್ ಅವರೇ ಚಿತ್ರಕಥೆ ಬರೆದು ಸಂಭಾಷಣೆ ಕೂಡಾ ರಚಿಸಿದ್ದಾರೆ. ದಿಶಾ ಪಾಂಡೆ, ಅಶೋಕ್, ಅವಿನಾಶ್, ರಂಗಾಯಣ ರಘು, ಸಾಧು ಕೋಕಿಲ, ಪ್ರಕಾಶ್ ಬೆಳವಾಡಿ, ಶಿವರಾಜ್ ಕೆ.ಆರ್.ಪೇಟೆ, ಚಿತ್ರಾ ಶೆಣೈ, ಪದ್ಮಜಾ ರಾವ್, ತಬಲಾ ನಾಣಿ, ಮಕರಂದ್ ದೇಶ್ಪಾಂಡೆ, ತಾರಕ್ ಪೊನ್ನಪ್ಪ, ರಾಕ್ಲೈನ್ ಸುಧಾಕರ್, ಅಂಥೋನಿ ಕಮಲ್, ಸುಂದರ್ ವೀಣಾ ಹಾಗೂ ಇತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ವಿ.ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ.
‘ಪ್ರೇಮಾಸುರ’
ಹರಿಹರಪುರ ನಾಗರಾಜ ಸಿ.ಎಲ್ ಕಥೆ, ಚಿತ್ರಕಥೆ, ಬರೆದು ನಿರ್ದೇಶಿಸಿರುವ ಸಿನಿಮಾ ಪ್ರೇಮಾಸುರ. ಚಿತ್ರವನ್ನು ನಾಗರಾಜ್ ಅವರೇ ನಿರ್ಮಿಸಿದ್ದಾರೆ. ಕಿರುತೆರೆ ಧಾರಾವಾಹಿ ನಟ ಶೀತಲ್ ರಾಜ್ ಈ ಸಿನಿಮಾ ಮೂಲಕ ಬೆಳ್ಳಿತೆರೆಗೆ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದಾರೆ. ಮೃದುಲ ಕಥಾನಾಯಕಿಯಾಗಿ ನಟಿಸಿದ್ದಾರೆ. ಪ್ರತಿಯೊಬ್ಬರಲ್ಲೂ ‘ಅಸುರ‘ ಗುಣ ಇದ್ದೇ ಇರುತ್ತದೆ. ಅದು ಒಂದಲ್ಲಾ ಒಂದು ಸಮಯದಲ್ಲಿ ಹೊರ ಬರುತ್ತದೆ. ಈ ಚಿತ್ರದಲ್ಲಿ ನಾಯಕ-ನಾಯಕಿ ಪ್ರೀತಿಯ ಬಲೆಯಲ್ಲಿ ಬಿದ್ದಾಗ ಏನೆಲ್ಲಾ ಜರುಗುತ್ತದೆ ಎಂಬುದನ್ನು ನಿರ್ದೇಶಕರು ಹೇಳಲು ಹೊರಟಿದ್ದಾರೆ. ತೆಲುಗು ಸಿನಿಮಾಗಳ ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ‘ಪ್ರೇಮಾಸುರ‘ ಚಿತ್ರದ ಒಂದು ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಶ್ರೀ ಹರಿಹರೇಶ್ವರ ಮೂವೀಸ್ ಬ್ಯಾನರ್ ಅಡಿ ಕಾಗೋಡ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆರ್.ಶಿವಪ್ರಸಾದ್ ಯಾದವ್ ಸಂಕಲನ, ರವಿ ಕಿಶೋರ್ ಛಾಯಾಗ್ರಹಣ ಚಿತ್ರಕ್ಕಿದೆ.