ಇತ್ತೀಚಿನ ದಿನಗಳಲ್ಲಿ ಬಹಳ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವ ನಟ ಪ್ರಮೋದ್ ಶೆಟ್ಟಿ ಈಗ ಗನ್ ಹಿಡಿದು ಶಿಕಾರಿಗೆ ಹೊರಟಿದ್ದಾರೆ. 'ಒಂದು ಶಿಕಾರಿಯ ಕಥೆ' ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ' ಹಾಗೂ 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದ ಪ್ರಮೋದ್ ಶೆಟ್ಟಿ ಈ ಚಿತ್ರದಲ್ಲಿ ಬರಹಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಒಂದು ಶಿಕಾರಿಯ ಕಥೆ' ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಚಿತ್ರಕ್ಕೆ ಯುವ ನಿರ್ದೇಶಕ ಸಚಿನ್ ಶೆಟ್ಟಿ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಕರಾವಳಿಯ ಗಂಡು ಕಲೆ ಎಂದೇ ಕರೆಸಿಕೊಳ್ಳುವ ಯಕ್ಷಗಾನವನ್ನು ಕೂಡಾ ತೋರಿಸಲಾಗಿದೆ. 80 ರ ದಶಕದಲ್ಲಿ ಜರುಗುವ ಸನ್ನಿವೇಶಗಳನ್ನು ಕೂಡಾ ಈ ಚಿತ್ರದಲ್ಲಿ ಈಗಿನ ಕಾಲಘಟ್ಟಕ್ಕೆ ತಕ್ಕಂತೆ ತೋರಿಸಲು ನಿರ್ದೇಶಕರು ಹೊರಟಿದ್ದಾರೆ. ಹೆಂಡತಿಯಿಂದ ದೂರವಾಗಿ ಏಕಾಂಗಿಯಾಗಿ ವಾಸಮಾಡುವ ಮಧ್ಯಮ ವಯಸ್ಸಿನ ಕಾದಂಬರಿಕಾರನ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ಚಿತ್ರದಲ್ಲಿ ಸಿರಿ ಪ್ರಹ್ಲಾದ್, ಪ್ರಸಾದ್ ಚೇರ್ಕಾಡಿ, ಎಂ.ಕೆ ಮಠ ಅಭಿಮನ್ಯು ಹಾಗೂ ಶ್ರೀಪ್ರಿಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ರಾಜೀವ ಶೆಟ್ಟಿ ಹಾಗೂ ಸಚಿನ್ ಶೆಟ್ಟಿ ಬಂಡವಾಳ ಹೂಡಿದ್ದಾರೆ. ಸದ್ಯಕ್ಕೆ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದ್ದು ಮುಂದಿನ ತಿಂಗಳು ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.