ಕನ್ನಡ ಸಿನಿಮಾದಲ್ಲಿ ಖಳನಟ ಅಲ್ಲದೆ ಪೋಷಕ ಪಾತ್ರಗಳಲ್ಲೂ ಗಮನ ಸೆಳೆಯುತ್ತಿರುವವರು ರಂಗಭೂಮಿ ನಟ ಪ್ರಮೋದ್ ಶೆಟ್ಟಿ. 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಇವರಿಗೆ ಒಂದು ಹೊಸ ಪಾತ್ರವನ್ನು ಕಲ್ಪಿಸಿತು ನಿಜ. ಆದರೆ ಒಂದೇ ಪಾತ್ರಕ್ಕೆ ಅಂಟಿಕೊಳ್ಳದೆ ಪ್ರಮೋದ್ ಶೆಟ್ಟಿ ಹಾಸ್ಯ ಮಿಶ್ರಿತ ಪಾತ್ರಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ಧಾರೆ.
ಈಗ 'ಲಾಫಿಂಗ್ ಬುದ್ಧ' ಚಿತ್ರದಲ್ಲಿ ಇವರದು ನಕ್ಕು ನಲಿಸುವ ಪಾತ್ರವಂತೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಹೆಡ್ ಕಾನ್ಸ್ಟೇಬಲ್ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರಲ್ಲಿ ಪ್ರಮೋದ್ ಶೆಟ್ಟ ದಢೂತಿ ವ್ಯಕ್ತಿ, ತಿಂಡಿಪೋತ ಕೂಡಾ. ಒಳ್ಳೆಯ ತಿಂಡಿ ಸಿಕ್ಕರೆ ಸುಮ್ಮನೆ ಕೂರುವ ಆಸಾಮಿ ಅಲ್ಲ. ಮನೆಯಲ್ಲಿ ಹೆಂಡತಿ ರುಚಿಕರವಾದ ಆಹಾರ ತಯಾರಿಸಿಕೊಡುತ್ತಾಳೆ. ಇದರಿಂದ ಪ್ರಮೋದ್ ಶೆಟ್ಟಿ ದಢೂತಿ ಹೆಡ್ ಕಾನ್ಸ್ಟೇಬಲ್ ಆಗಿ ಇಲಾಖೆಯ ಕೆಂಗಣ್ಣಿಗೆ ಗುರಿಯಾಗುತ್ತಾರೆ.
ಧಡೂತಿ ದೇಹದಿಂದ ಪ್ರಮೋದ್ ಶೆಟ್ಟಿಗೆ ಡಿಮೋಷನ್ ಆಗುತ್ತದೆ. ಆಗಲೇ ನಾಯಕನಿಗೆ ಜ್ಞಾನೋದಯ ಆಗುತ್ತದೆ. ತೂಕ ಇಳಿಸಲು ಏನೆಲ್ಲಾ ಸರ್ಕಸ್ ಮಾಡುತ್ತಾನೆ ಎನ್ನುವುದೇ ಕಥಾಹಂದರ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದಲ್ಲಿ ಸಹಾಯಕರಾಗಿ ನಿರ್ದೇಶನ ವಿಭಾಗದಲ್ಲಿ ಇದ್ದ ಭರತ್ ಈ 'ಲಾಫಿಂಗ್ ಬುದ್ದ' ಚಿತ್ರದಿಂದ ಸ್ವತಂತ್ರವಾಗಿ ನಿರ್ದೇಶನ ಮಾಡಲಿದ್ದಾರೆ. ನಾಯಕಿಯ ಆಯ್ಕೆ ನಡೆಯುತ್ತಿದೆ. ಹಾಗೆ ಕೆಲವು ರಂಗಭೂಮಿ ಕಲಾವಿದರು ಕೂಡಾ ಚಿತ್ರದಲ್ಲಿ ನಟಿಸಲಿದ್ದಾರೆ.
ತ್ರಿಲೋಕ್ ತ್ರಿವಿಕ್ರಮ್ ಐದು ಹಾಡುಗಳಿಗೆ ಗೀತರಚನೆ ಒದಗಿಸುತ್ತಿದ್ದಾರೆ. ಸಂಗೀತ ನಿರ್ದೇಶಕ ಆಯ್ಕೆ ಆಗಿಲ್ಲ. ಪ್ರತೀಕ್ ಶೆಟ್ಟಿ ಸಂಕಲನ ಮಾಡಲಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ತೀರ್ಮಾನಿಸಿದೆ. ರಿಷಭ್ ಶೆಟ್ಟಿ ಫಿಲ್ಮ್ಸ್ ಚಿತ್ರವನ್ನು ನಿರ್ಮಾಣ ಮಾಡಲಿದೆ.