ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಒಪ್ಪಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ಪ್ರಜ್ವಲ್ ಹಾಗೂ ನಟಿ ಹರಿಪ್ರಿಯಾ ಕಿರುತೆರೆ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪ್ರಜ್ವಲ್ ಮತ್ತು ಹರಿಪ್ರಿಯಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಹೊಸ ವಿಷಯವೇನಲ್ಲ. ಈಗಾಗಲೇ ' ಸಾಗರ್', 'ಸೂಪರ್ ಶಾಸ್ತ್ರಿ' ಮತ್ತು 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ, ಬಹಳ ದಿನಗಳ ನಂತರ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಹೊಸ ಡ್ಯಾನ್ಸ್ ರಿಯಾಲಿಟಿ ಶೋ ' ಡ್ಯಾನ್ಸ್ ಡ್ಯಾನ್ಸ್' ನಲ್ಲಿ ಪ್ರಜ್ವಲ್ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಕೇಳಿಬಂದಿತ್ತು. ' ಡ್ಯಾನ್ಸ್ ಡ್ಯಾನ್ಸ್' ಕಾರ್ಯಕ್ರಮದಲ್ಲಿ ಪ್ರಜ್ವಲ್ ಮತ್ತು ಹರಿಪ್ರಿಯಾ ಜೊತೆಗೆ ನೃತ್ಯ ನಿರ್ದೇಶಕ ಹರ್ಷ ಮಾಸ್ಟರ್ ಸಹ ಇನ್ನೊಬ್ಬ ತೀರ್ಪುಗಾರರಾಗಿ ಮಿಂಚಲಿದ್ದಾರಂತೆ.
ಇದೇ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿರುವ ಬಗ್ಗೆ ಮಾತನಾಡಿದ ಹರಿಪ್ರಿಯಾ, ಬಹಳ ದಿನಗಳಿಂದ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಆಫರ್ಗಳು ಬರುತ್ತಲೇ ಇದ್ದವು. ಆದರೆ ನಾನು ಒಪ್ಪಿರಲಿಲ್ಲ. ಇದು ಡ್ಯಾನ್ಸ್ ರಿಯಾಲಿಟಿ ಶೋ ಆಗಿದ್ದರಿಂದ ಒಪ್ಪಿಕೊಂಡೆ. ನನಗೆ ನೃತ್ಯವೆಂದ್ರೆ ಬಹಳ ಇಷ್ಟ. ಅದನ್ನೇ ಮೂಲವಾಗಿಟ್ಟುಕೊಂಡು ಸ್ಟಾರ್ ಸುವರ್ಣದವರು ಒಂದು ವಿಭಿನ್ನವಾದ ರಿಯಾಲಿಟಿ ಶೋ ಮಾಡುತ್ತಿದ್ದಾರೆ. ಸಿನಿಮಾ ಜೊತೆಗೆ ಕಿರುತೆರೆಯನ್ನು ನಿಭಾಯಿಸಬಹುದು ಎಂಬ ನಂಬಿಕೆಯಿಂದ ಒಪ್ಪಿಕೊಂಡೆ ಎಂದಿದ್ದಾರೆ.
ಇನ್ನು 'ಡ್ಯಾನ್ಸ್ ಡ್ಯಾನ್ಸ್' ಶೋ ಅನ್ನು ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ ನಿರೂಪಣೆ ಮಾಡುತ್ತಿದ್ದು ಈಗಾಗಲೇ ಕಾರ್ಯಕ್ರಮದ ಪ್ರೋಮೋ ಶೂಟ್ ಮುಗಿದಿದೆ. ಕೆಲವೇ ದಿನಗಳಲ್ಲಿ ಕಾರ್ಯಕ್ರಮ ಪ್ರಾರಂಭವಾಗುತ್ತಿದೆ.