ಯುವರತ್ನ ಸಿನಿಮಾ ಸಕ್ಸಸ್ ಬೆನ್ನಲ್ಲೇ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೊಸ ಸಿನಿಮಾವೊಂದು ಅನೌನ್ಸ್ ಮಾಡಿದ್ದಾರೆ.
ಬಹಾದ್ದೂರ್ ಖ್ಯಾತಿಯ ಚೇತನ್‌ಕುಮಾರ್ ನಿರ್ದೇಶಿಸುತ್ತಿರುವ ಜೇಮ್ಸ್ ಚಿತ್ರವೂ ಸೇರಿದಂತೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಜೊತೆಗೆ ಪುನೀತ್ ರಾಜ್‍ಕುಮಾರ್ ಈಗ ಯುಗಾದಿ ಹಬ್ಬಕ್ಕೆ ಹೊಸ ಮೂವಿಯೊಂದನ್ನ ಅನೌನ್ಸ್ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಲೂಸಿಯಾ ಚಿತ್ರದ ನಿರ್ದೇಶಕ ಪವನ್ ಕುಮಾರ್ ನಿರ್ದೇಶನದಲ್ಲಿ ಸಿನಿಮಾ ಮಾಡ್ತಾರೆ ಎಂದು ಸ್ಯಾಂಡಲ್ ವುಡ್ನಲ್ಲಿ ಸುದ್ದಿಯಾಗಿತ್ತು. ಈಗ ಆ ಸುದ್ದಿ ನಿಜ ಆಗಿದೆ. ಪವರ್ ಸ್ಟಾರ್ ಮುಂದಿನ ಸಿನಿಮಾಕ್ಕೆ ಪವನ್ ನಿರ್ದೇಶನ ಮಾಡುವುದು ಪಕ್ಕಾ ಆಗಿದೆ. ಈ ಬಹು ನಿರೀಕ್ಷಿತ ಪ್ರಾಜೆಕ್ಟ್‌ಗೆ ಸೌತ್ ಇಂಡಿಯಾದ ಬಿಗ್ ಪ್ರೊಡಕ್ಷನ್ ಹೌಸ್ ಎನಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಿರ್ಮಾಪಕ ವಿಜಯ್ ಕಿರಂಗದೂರ್ ಪುನೀತ್ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ಮತ್ತು ಪವನ್ ಕುಮಾರ್ ಕಾಂಬಿನೇಷನ್ ಹೊಸ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಲಿದ್ದು, 2021ರ ಜುಲೈನಿಂದ ಶೂಟಿಂಗ್ ಆರಂಭಗೊಳ್ಳಲಿದೆ.
ಪ್ರಯೋಗಾತ್ಮಕ ಸಿನಿಮಾಗಳಿಗೆ ಹೆಸರಾದ ಪವನ್ ಕುಮಾರ್, ಮಾಸ್ ಅಂಡ್ ಕ್ಲಾಸ್ ಇಮೇಜ್ ಇರುವ ಪುನೀತ್ ಅವರಿಗೆ ಎಂಥ ಸಿನಿಮಾ ಮಾಡಬಹುದು ಎಂಬ ನಿರೀಕ್ಷೆ ಸಿನಿಪ್ರಿಯರ ವಲಯದಲ್ಲಿ ಹುಟ್ಟುಕೊಂಡಿದೆ. ಹೊಂಬಾಳೆ ಸಂಸ್ಥೆ ಜೊತೆ ಪುನೀತ್ 4ನೇ ಸಿನಿಮಾ ಇದಾಗಿದೆ.
2013ರಲ್ಲಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ಈವರೆಗೂ 5 ಸಿನಿಮಾಗಳನ್ನು ರಿಲೀಸ್ ಮಾಡಿದೆ. ಜೊತೆಗೆ ಘೋಷಣೆ ಮಾಡಿರುವ ಸಿನಿಮಾಗಳ ಸಂಖ್ಯೆಯೂ ಸೇರಿದರೆ, ಒಟ್ಟು 9 ಆಗಲಿದೆ. ಆ 9ರಲ್ಲಿ ನಾಲ್ಕು ಸಿನಿಮಾಗಳನ್ನು ಪುನೀತ್ ರಾಜ್‍ಕುಮಾರ್ ಜೊತೆ ಮಾಡಿರೋದು ವಿಶೇಷ.