ಭುವನೇಶ್ವರ: ಒಡಿಯಾದ ಹಿರಿಯ ನಟ ಮಿಹಿರ್ ದಾಸ್ (63) ಮಂಗಳವಾರ ಕಟಕ್ನ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಒಂದು ತಿಂಗಳ ಹಿಂದೆ ಕಟಕ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜನಪ್ರಿಯ ನಟ ಹಲವು ವರ್ಷಗಳಿಂದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು ಮತ್ತು ಕಳೆದ ವರ್ಷ ಡಿಸೆಂಬರ್ 9 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ದಾಸ್ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಯಿತು. ಆದರೆ, ನಿನ್ನೆ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ್ದಾರೆ.
ಫೆಬ್ರವರಿ 11, 1959 ರಂದು ಮಯೂರ್ಭಂಜ್ ಜಿಲ್ಲೆಯಲ್ಲಿ ಜನಿಸಿದ ಅವರು 'ಸ್ಕೂಲ್ ಮಾಸ್ಟರ್' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಅವರು 'ಮಥುರಾ ಬಿಜಯ್' (1979) ನಲ್ಲಿ ಕಾಣಿಸಿಕೊಂಡರು. 1998ರ 'ಲಕ್ಷ್ಮಿ ಪ್ರತಿಮಾ' ಮತ್ತು 2005ರ 'ಫೆರಿಯಾ ಮೋ ಸುನಾ ಭೌನಿ' ಚಿತ್ರದಲ್ಲಿನ ಅಭಿನಯಕ್ಕಾಗಿ ಮಿಹಿರ್ ಅವರಿಗೆ ರಾಜ್ಯ ಸರ್ಕಾರ ಅತ್ಯುತ್ತಮ ನಟ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ.
ಈ ನಟ ರಾಜಕೀಯದಲ್ಲೂ ಕೂಡ ಅದೃಷ್ಟ ಪರೀಕ್ಷೆಗಿಳಿದಿದ್ದರು. 2014 ರಲ್ಲಿ, ಅವರು ಆಡಳಿತಾರೂಢ ಬಿಜು ಜನತಾ ದಳಕ್ಕೆ ಸೇರಿದ್ದರು. ಆನಂತರ ಪಕ್ಷವನ್ನು ತೊರೆದು 2019 ರಲ್ಲಿ ಬಿಜೆಪಿ ಸೇರಿದರು. ಮಿಹಿರ್ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಹಾಗೂ ರಾಜಕೀಯ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.