ಬೆಂಗಳೂರು: ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದ ಹಿನ್ನೆಲೆ ಶೇ.100ರಷ್ಟು ಆಸನ ಭರ್ತಿಗೆ ಸರ್ಕಾರ ಅನುಮತಿ ನೀಡಿದೆ. ಸ್ಯಾಂಡಲ್ ವುಡ್ ನಲ್ಲಿ ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿದ್ದು, ಈ ನಡುವೆಯೇ ಮತ್ತೆ ಪೈರಸಿ(Piracy) ಭೂತ ಕಾಡಲು ಆರಂಭಿಸಿದೆ.
ಸ್ಯಾಂಡಲ್ವುಡ್ ಕೋವಿಡ್ ಹೊಡೆತದಿಂದ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿರುವಾಗಲೇ ಕಿಡಿಗೇಡಿಗಳು ಹೊಸದಾಗಿ ಬಿಡುಗಡೆಯಾದ ಕನ್ನಡ ಚಿತ್ರಗಳನ್ನು ಪೈರಸಿ ಮಾಡಿ, ಟೆಲಿಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಲಿಂಕ್ ಹರಿಬಿಡುತ್ತಿದ್ದಾರೆ. ಈ ಸಂಬಂಧ ಶಾರ್ದೂಲ ಸಿನಿಮಾ ನಿರ್ಮಾಪಕರು ಸೈಬರ್ ಕ್ರೈಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಕೊರೊನಾ ಹೊಡೆತಕ್ಕೆ ಸಿಲುಕಿ ನಲುಗಿದ್ದ ಕನ್ನಡ ಚಿತ್ರೋದ್ಯಮ ಒಂದೂವರೆ ವರ್ಷದಿಂದ ಸಾಕಷ್ಟು ಸವಾಲುಗಳನ್ನ ಎದುರಿಸಿತ್ತು. ಕೊರೊನಾ ಎರಡನೇ ಅಲೆ ನಂತರ ಸಿನಿರಂಗ ಸ್ವಲ್ಪ ಚೇತರಿಸಿಕೊಂಡು, ಬಿಡುಗಡೆಗೆ ಸಿದ್ಧವಾಗಿದ್ದ ಹಲವು ಹೊಸ ಸಿನಿಮಾಗಳನ್ನ ರಿಲೀಸ್ ಮಾಡಿತ್ತು. ನಟ ಅಜಯ್ ರಾವ್ ಅಭಿನಯದ 'ಕೃಷ್ಣ ಟಾಕೀಸ್', ಲೂಸ್ ಮಾದ ಯೋಗಿ ಅಭಿನಯದ 'ಲಂಕೆ', ನಟ ಚೇತನ್ ಚಂದ್ರ ಅಭಿನಯದ 'ಶಾರ್ದೂಲ' ಹಾಗೂ ಸೂರಜ್ ಗೌಡ ಹಾಗೂ ಡಾ. ರಾಜ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಅಭಿನಯದ 'ನಿನ್ನ ಸನಿಹಕೆ' ಸಿನಿಮಾಗಳು ತೆರೆಕಂಡಿದ್ದವು. ಆದರೆ ಕಳೆದ ಒಂದೂವರೆ ತಿಂಗಳಿಂದ ರಿಲೀಸ್ ಆದ ಅಷ್ಟು ಕನ್ನಡ ಸಿನಿಮಾಗಳು ಪೈರಸಿಯಾಗಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಕಳೆದ ವಾರವಷ್ಟೇ ಬಿಡುಗಡೆಯಾದ 'ನಿನ್ನ ಸನಿಹಕೆ' ಸಿನಿಮಾವನ್ನು ಕೂಡ ಪೈರಸಿ ಮಾಡಿದ್ದು, ಸಿನಿಮಾ ತಂಡಕ್ಕೆ ದೊಡ್ಡ ಶಾಕ್ ಆಗಿದೆ. ಕೇವಲ ಕನ್ನಡ ಸಿನಿಮಾ ಮಾತ್ರವಲ್ಲದೆ ತೆಲುಗು, ತಮಿಳಿನಿಂದ ಕನ್ನಡಕ್ಕೆ ಡಬ್ ಆದ ನಶಾ, ಪದ್ಮವ್ಯೂಹ, ಸರೈಪೊಟ್ರು ಸೇರಿದಂತೆ ವೆಬ್ ಸೀರಿಸ್ಗಳನ್ನ ಕಿಡಿಗೇಡಿಗಳು ಪೈರಸಿ ಮಾಡಿದ್ದಾರೆ.
ಯುವ ಮೂವೀಸ್ ಹೆಸರಿನಲ್ಲಿ ಟೆಲಿಗ್ರಾಂನಲ್ಲಿ ಸಿನಿಮಾ ಪೈರಸಿ ಮಾಡಿ ಹರಿಬಿಡಲಾಗಿದ್ದು, ಈ ಬಗ್ಗೆ ಶಾರ್ದೂಲ ಸಿನಿಮಾ ನಿರ್ಮಾಪಕ ರೋಹಿತ್ ಬೆಂಗಳೂರು ಸೆಂಟ್ರಲ್ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಕೊಡುತ್ತಿದ್ದಂತೆಯೇ ಪೈರಸಿ ಖದೀಮರು ಅಲರ್ಟ್ ಆಗಿದ್ದು, ಟೆಲಿಗ್ರಾಂನಲ್ಲಿ ಯುವ ಮೂವೀಸ್ ಗ್ರೂಪ್ ಅನ್ನು ಡಿಲೀಟ್ ಮಾಡಿದ್ದಾರೆ.
ಕನ್ನಡ ಸಿನಿಮಾ ಪೈರಸಿ ವಿಚಾರವನ್ನ ಕನ್ನಡ ಸಿನಿರಂಗ ಹಾಗೂ ಸೈಬರ್ ಕ್ರೈಂ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ನಿರ್ಮಾಪಕ ರೋಹಿತ್ ನೀಡಿರುವ ದೂರಿನನ್ವಯ ಮಾಹಿತಿ ತಂತ್ರಜ್ಞಾನ ಕಾಯ್ದೆ(Information and technology Act) 66(C), 66(D) ಹಾಗೂ ಐಪಿಸಿ ಸೆಕ್ಷನ್ 511 ಹಾಗೂ 420 ಅಡಿಯಲ್ಲಿ ಎಫ್.ಐ.ಆರ್ ದಾಖಲು ಮಾಡಿದ್ದಾರೆ. ಅಲ್ಲದೇ, ಟೆಲಿಗ್ರಾಂ ಆ್ಯಪ್ಗೆ ಮೇಲ್ ಮಾಡಿ ಪೈರಸಿ ಆಗಿದ್ದ ಸಿನಿಮಾಗಳ ಲಿಂಕ್ಗಳನ್ನ ಪೊಲೀಸರು ಡಿಲೀಟ್ ಮಾಡಿಸಿದ್ದಾರೆ. ಜೊತೆಗೆ ಪೈರಸಿ ಮಾಡ್ತಿರೋ ಆರೋಪಿಗಳನ್ನ ಬಂಧಿಸಲು ವಿಶೇಷ ತಂಡ ರಚಿಸಲಾಗಿದೆ.