ಮಂಗಳೂರು: 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ತುಳು ಸಿನಿಮಾ 'ಪಿಂಗಾರ'ಕ್ಕೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ತುಳು ಚಿತ್ರರಂಗ 50 ವರ್ಷ ಪೂರೈಕೆ ಮಾಡಿರುವ ಸಂದರ್ಭದಲ್ಲಿ ಈ ಪ್ರಶಸ್ತಿ ಲಭಿಸಿರುವುದು ಇದರ ಸಂಭ್ರಮ ಇನ್ನಷ್ಟು ಹೆಚ್ಚಿಸಿದೆ.
ಈಗಾಗಲೇ ಅತ್ಯುತ್ತಮ ಏಷಿಯನ್ ಸಿನಿಮಾ-ನೆಟ್ ಪ್ಯಾಕ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ 'ಪಿಂಗಾರ' ತುಳು ಸಿನಿಮಾಕ್ಕೆ ಇದೀಗ ರಾಷ್ಟ್ರ ಪ್ರಶಸ್ತಿಯ ಗರಿ ಮೂಡಿದೆ. ಆರ್. ಪ್ರೀತಮ್ ಶೆಟ್ಟಿ ನಿರ್ದೇಶನದ ಸಿನಿಮಾ 2019ನೇ ಸಾಲಿನ 67ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವರ್ಷದ ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿಯನ್ನು ಚಾಚಿಕೊಂಡಿದೆ.
ಇದನ್ನೂ ಓದಿ: ಕನ್ನಡದ 'ಅಕ್ಷಿ' ಅತ್ಯುತ್ತಮ ಚಿತ್ರ: ಈಟಿವಿ ಭಾರತ ಜತೆ ನಿರ್ದೇಶಕ ಮನೋಜ್ ಮಾತು
ಕರಾವಳಿಯ ಭೂತಾರಾಧನೆ ಹಾಗೂ ಮೇಲು-ಕೀಳೆಂಬ ತಾರತಮ್ಯದಿಂದಾಗುವ ಅನ್ಯಾಯಕ್ಕೆ ದೈವ ಹೇಗೆ ನ್ಯಾಯ ಕೊಡುತ್ತದೆ ಎಂಬ ಕಥಾ ಹಂದರ ಈ ಸಿನಿಮಾದಲ್ಲಿದೆ. ಅವಿನಾಶ್ ಯು ಶೆಟ್ಟಿ, ಮಂಜುನಾಥ್ ರೆಡ್ಡಿ ಈ ಸಿನಿಮಾದ ನಿರ್ಮಾಪಕರಾಗಿದ್ದು, ವಿ ಪವನ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ನೀಮಾ ರೇ, ಶರಣ್ ಶೆಟ್ಟಿ, ಉಷಾ ಭಂಡಾರಿ, ಸಿಂಚನಾ ಚಂದ್ರಮೋಹನ್, ಸುನಿಲ್ ನೆಲ್ಲಿಗುಡ್ಡೆ, ರಂಜಿತ್ ಸುವರ್ಣ, ಪ್ರಶಾಂತ್ ಸಿ ಕೆ. ಕಲಾವಿದರಾಗಿ ಅಭಿನಯಿಸಿದ್ದಾರೆ.