ಕಳೆದ 15 ದಿನಗಳ ಹಿಂದೆ ಅಪಘಾತಕ್ಕೀಡಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಟಿಲ್ ಸೀನು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಆರ್. ಶ್ರೀನಿವಾಸ್, ಸ್ಟಿಲ್ ಸೀನು ಎಂದೇ ಹೆಸರಾಗಿದ್ದರು.
'ನಂಜುಂಡಿ ಕಲ್ಯಾಣ' ಚಿತ್ರದ ಮೂಲಕ ಫೋಟೋಗ್ರಾಫರ್ ಆಗಿ ಕೆಲಸ ಆರಂಭಿಸಿ ಇದುವರೆಗೂ ಸುಮಾರು 250 ಸಿನಿಮಾಗಳಿಗೆ ಸೀನು ಕೆಲಸ ಮಾಡಿದ್ದರು. ಸುಮಾರು 30 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸ್ಟಿಲ್ ಸೀನು 'ಗಹನ' ಎಂಬ ಚಿತ್ರವನ್ನು ನಿರ್ಮಾಣ ಕೂಡಾ ಮಾಡಿದ್ದರು. 15 ದಿನಗಳ ಹಿಂದೆ ಮೈಸೂರು ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಸ್ಟಿಲ್ ಸೀನು ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೀನು ಅವರನ್ನು ದಾಖಲಿಸಲಾಗಿತ್ತು. ಆದರೆ ಸೀನು ಕೋಮಾದಿಂದ ಹೊರಗೆ ಬರದೆ ಇಂದು ಬೆಳಗ್ಗೆ 5 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
'ನಂಜುಂಡಿ ಕಲ್ಯಾಣ' ಅವರು ಕೆಲಸ ಮಾಡಿದ ಮೊದಲ ಸಿನಿಮಾ ಆದರೆ, ಕಳೆದ ವರ್ಷ ಬಿಡುಗಡೆಯಾದ 'ಕುರುಕ್ಷೇತ್ರ', ಸೀನು ಕೆಲಸ ಮಾಡಿದ ಕಡೆಯ ಸಿನಿಮಾ ಆಗಿತ್ತು. ದುಬೈ ಕನ್ನಡ ಸಂಘ 12 ನೇ ರಾಜ್ಯೋತ್ಸವ ಸಮಾರಂಭದಲ್ಲಿ ಸೀನು ಅವರನ್ನು ಸನ್ಮಾನಿಸಿತ್ತು. ಮೃದು ಸ್ವಭಾವ, ಸಜ್ಜನಿಕೆಯ ವ್ಯಕ್ತಿತ್ವ ಶ್ರೀನಿವಾಸ್ ಅವರದ್ದು. ಸ್ಟಿಲ್ ಸೀನು ಪತ್ನಿ, ಮಗಳು ಹಾಗೂ ಮಗನನ್ನು ಅಗಲಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ. ಸೀನು ನಿಧನಕ್ಕೆ ಸ್ಯಾಂಡಲ್ವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ.