ಕೊರೊನಾ ಲಾಕ್ಡೌನ್ ಸಮಯದಲ್ಲಿ ಹಾಡುಗಳು, ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದವರೇ ಹೆಚ್ಚಾಗಿದ್ದು ಈ ಸಮಯದಲ್ಲಿ ಚಿತ್ರರಂಗ ಹೇಗೆ ಗಟ್ಟಿಯಾಗಬೇಕು ಎಂದು ಯಾರೂ ಚಿಂತನೆ ಮಾಡಿಲಿಲ್ಲ. ಆದರೆ ಈ ಬಗ್ಗೆ ನಿರ್ದೇಶಕ ಪವನ್ ಕುಮಾರ್ ಒಂದು ಹೊಸ ಪ್ಲ್ಯಾನ್ ಮಾಡಿದ್ದಾರೆ.
ಕ್ರೌಡ್ ಫಂಡಿಂಗ್ ಮೂಲಕ 'ಲೂಸಿಯಾ' ಚಿತ್ರವನ್ನು ಹೇಗೆ ಮಾಡಿದರೋ ಅದೇ ರೀತಿ ಪವನ್ ಕುಮಾರ್ ಕ್ರೌಂಡ್ ಫಂಡ್ ಸಂಗ್ರಹಿಸಿ ನೂರಾರು ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಅದೇ ಪವನ್ ಕುಮಾರ್ ಚಿತ್ರರಂಗಕ್ಕೆ ಹೊಸ ಯೋಜನೆಯನ್ನು ಮುಂದಿಟ್ಟಿದ್ದಾರೆ.
ಚಿತ್ರ ನಿರ್ಮಾತೃಗಳು ಈಗ ಫಿಲ್ಮ್ ಯುನೈಟೆಡ್ ಕ್ಲಬ್ (ಎಫ್ಯುಸಿ) ಎಂಬ ವೇದಿಕೆಯನ್ನು ಹುಟ್ಟುಹಾಕಿದ್ದಾರೆ. ಇದರ ಅಡಿಯಲ್ಲಿ ಖ್ಯಾತ ನಿರ್ದೇಶಕರು, ನಿರ್ಮಾಪಕರು , ಅಭಿಮಾನಿಗಳು ಚಿತ್ರಗಳು ಮತ್ತು ಪ್ರದರ್ಶನದ ಬಗ್ಗೆ ಸಂವಾದ ನಡೆಸಲಿದ್ದಾರೆ. ಈ ಚರ್ಚೆ ಮೂಲಕ ನಿರ್ದೇಶಕರು ಹಾಗೂ ಪ್ರೇಕ್ಷಕರು ಹತ್ತಿರ ಆಗುತ್ತಾರೆ. ಮತ್ತೆ ಥಿಯೇಟರ್ಗೆ ಬಂದು ಸಿನಿಮಾ ನೋಡುವವರು ಹೆಚ್ಚಾಗುತ್ತಾರೆ. ಈ ವೇದಿಕೆಯಿಂದ ಸಿನಿಮಾ ನಿರ್ಮಾಣಕ್ಕೆ ಬೇಕಾದ ಹಣ ಸಹ ಸಂಗ್ರಹ ಕೂಡಾ ಮಾಡಬಹುದು.
ಕ್ಲಬ್ ಸದಸ್ಯರಿಗೆ ಉತ್ತಮ ವಿಚಾರಗಳು ಇಲ್ಲಿ ಸಿಗಲಿದೆ. ಸಿನಿಮಾ ವಿಶ್ಲೇಷಣೆ, ವಿಮರ್ಶೆ, ನಿರ್ದೇಶಕರ ಸಂದರ್ಶನ, ಸಿನಿಮಾ ಇತಿಹಾಸ ಹಲವಾರು ವಿಚಾರಗಳು ಸಿಕ್ಕಂತೆ ಆಗುತ್ತದೆ. ಈ ಕ್ಲಬ್ ಮೂಲಕ ಸಿನಿಮಾ ಆಸಕ್ತರು ಒಂದು ಕಡೆ ಸೇರಿದಂತೆ ಆಗುತ್ತದೆ. ಹೊಸ ವಿಚಾರ, ಆವಿಷ್ಕಾರಗಳ ಬಗ್ಗೆ ಚರ್ಚೆ, ಕಲಿಕೆಯು ಯೂಟ್ಯೂಬ್ ಚಾನಲ್, ವೆಬ್ಸೈಟ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ದೊರೆಯಲಿದೆ ಎಂದು ಪವನ್ ಕುಮಾರ್ ಪ್ಲ್ಯಾನ್ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಯೋಚಿಸಿ ರೂಪುರೇಷೆಗಳನ್ನು ಸಿದ್ಧ ಮಾಡಿದ್ದಾರೆ. ಇದು ಯಾವ ರೀತಿ ಜಾರಿಗೆ ಬರಲಿದೆ ಕಾದುನೋಡಬೇಕು.