ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಮರೇಂಡುವಿಲ್ಲ-ಚಿಂಟೂರು ಘಾಟ್ ರಸ್ತೆ ಸಮೀಪ ನಿನ್ನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಡಿದ ಕನ್ನಡಿಗರಿಗೆ ಆಂಧ್ರಪ್ರದೇಶದ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಸಂತಾಪ ಸೂಚಿಸಿದ್ದಾರೆ.
ದೇವರ ದರ್ಶನಕ್ಕಾಗಿ ಆಗಮಿಸಿದ್ದ ಕನ್ನಡಿಗರು, ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆ ಮರೇಂಡುವಿಲ್ಲ-ಚಿಂಟೂರು ರಸ್ತೆಯ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಆ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅಲ್ಲದೇ ದುರಂತದಲ್ಲಿ ಐದು ಮಂದಿ ಪ್ರವಾಸಿಗರಿಗೆ ತೀವ್ರ ಗಾಯವಾಗಿದೆ. ಆ ಪ್ರವಾಸಿಗರಿಗೆ ಬೇಕಾದ ಚಿಕಿತ್ಸೆಯನ್ನು ಆಂಧ್ರ ಸರ್ಕಾರದರಿಂದಲೇ ಕೊಡಿಸುವ ಭರವಸೆ ಕೊಡುತ್ತೇನೆ ಎಂದು ಪವನ್ ಕಲ್ಯಾಣ್ ಕನ್ನಡದಲ್ಲೇ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಘಟನೆಯ ವಿವರ:
ಮಂಗಳವಾರ ಬೆಳಗ್ಗೆ ಚಿತ್ರದುರ್ಗದಿಂದ ಭದ್ರಾಚಲಂಗೆ ತೆರಳಿರುವ 12 ಮಂದಿ ಕನ್ನಡಿಗರು ದೇವರ ದರ್ಶನ ಪಡೆದಿದ್ದರು. ಬಳಿಕ ಅಲ್ಲಿಂದ ಅಣ್ಣಾವರಂಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ದಿಢೀರ್ ಕಂದಕಕ್ಕೆ ಉರುಳಿದೆ. ದುರ್ಘಟನೆಯಲ್ಲಿ ಮಡಿದ 7 ಮಂದಿ ಮೃತರು ಚಿತ್ರದುರ್ಗದ ಚಳ್ಳಕರೆ ಮೂಲದವರಾಗಿದ್ದರು.