ಕಳೆದ ಮೂರು ವರ್ಷಗಳಿಂದ ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ಅವರ ಸುದ್ದಿಯೇ ಇರಲಿಲ್ಲ. ಹುಚ್ಚ-2 ಚಿತ್ರದ ನಂತರ ಅವರು ಒಂದೆರೆಡು ಚಿತ್ರಗಳನ್ನು ನಿರ್ದೇಶಿಸುವುದಕ್ಕೆ ಪ್ರಯತ್ನಿಸಿದರಾದರೂ, ಕಾರಣಾಂತರಗಳಿಂದ ಆ ಚಿತ್ರಗಳು ಶುರು ಆಗಲೇ ಇಲ್ಲ. ಈ ಪೈಕಿ ಚಂದ್ರಲೇಖ ರಿಟರ್ನ್ಸ್ ಸಹ ಒಂದು.
ಓಂಪ್ರಕಾಶ್ ರಾವ್, ಚಂದ್ರಲೇಖ ರಿಟರ್ನ್ಸ್ ಎಂಬ ಚಿತ್ರ ಮಾಡುತ್ತಾರೆ ಎನ್ನುವುದು ಬಹಳ ಹಳೆಯ ಸುದ್ದಿ. ಮದರಂಗಿ ಕೃಷ್ಣ ಅಭಿನಯದಲ್ಲಿ ಒಂದೆರೆಡು ವರ್ಷಗಳ ಹಿಂದೆ ಅವರು, ಈ ಚಿತ್ರವನ್ನು ಘೋಷಿಸಿದ್ದರು. ಇನ್ನೇನು ಚಿತ್ರೀಕರಣ ಶುರುವಾಗಬೇಕು ಎನ್ನುವಷ್ಟರಲ್ಲಿ ಚಿತ್ರ ಕಾರಣಾಂತರಗಳಿಂದ ನಿಂತಿತ್ತು.
ಇದೀಗ ಅದೇ ಚಂದ್ರಲೇಖ ರಿಟರ್ನ್ಸ್ ಮತ್ತು ಮದರಂಗಿ ಕೃಷ್ಣ ಜತೆಗೆ ಅವರು ವಾಪಸಾಗಿದ್ದಾರೆ. ಇತ್ತೀಚೆಗೆ ಆ ಚಿತ್ರದ ಮುಹೂರ್ತ ಸಹ ಸರಳವಾಗಿ ಮುಗಿದಿದೆ.
ಗಾಂಧಿನಗರದ ಆನಂದರಾವ್ ಸರ್ಕಲ್ನಲ್ಲಿರುವ ಶ್ರೀ ವಿನಾಯಕ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿತ್ತು. ಈ ಸಂದರ್ಭದಲ್ಲಿ ಓಂಪ್ರಕಾಶ್, ನಿರ್ಮಾಪಕ ರವೀಶ್ ಸೇರಿದಂತೆ ಕೆಲವರು ಹಾಜರಿದ್ದರು.
ಚಿತ್ರದ ಮುಹೂರ್ತ ಆಗಿದೆಯಾದರೂ, ಚಿತ್ರೀಕರಣ ಪ್ರಾರಂಭವಾಗುವುದು ಇನ್ನೊಂದು ತಿಂಗಳ ನಂತರವೇ. ನಾಯಕ ಕೃಷ್ಣ ಬೇರೆ ಚಿತ್ರಗಳಲ್ಲಿ ತೊಡಗಿಸಿಕೊಂಡಿರುವುದರಿಂದ, ಅವರು ಆ ಕೆಲಸಗಳನ್ನು ಮುಗಿಸಿಕೊಂಡು ಈ ಚಿತ್ರಕ್ಕೆ ವಾಪಸಾಗಲಿದ್ದಾರೆ.
ಕೃಷ್ಣನಿಗೆ ಜೊತೆಯಾಗಿ ದಕ್ಷಿಣ ಭಾರತದ ಜನಪ್ರಿಯ ನಟಿಯೊಬ್ಬರು ಈ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ಈಗಾಗಲೇ ಕೆಲವರನ್ನು ಸಂಪರ್ಕಿಸಲಾಗಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಚಂದ್ರಲೇಖ ಯಾರಾಗುತ್ತಾರೆ ಎಂಬ ಖಚಿತ ಮಾಹಿತಿ ಸಿಗಲಿದೆ.
ಉಳಿದಂತೆ ಚಿತ್ರದಲ್ಲಿ ಸಾಧು ಕೋಕಿಲ, ನಾಗಶೇಖರ್, ಪ್ರಶಾಂತ್ ಸಿದ್ಧಿ ವಿವಿನ್ ಸೂರ್ಯ ಮುಂತಾದವರು ನಟಿಸುತ್ತಿದ್ದಾರೆ. ಈ ಹಿಂದೆ ಶಾನ್ವಿ ಅಭಿನಯದ ಕಸ್ತೂರಿ ಮಹಲ್ ಚಿತ್ರವನ್ನು ನಿರ್ಮಿಸಿದ್ದ ರವೀಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಂದಹಾಗೆ, ಇದು ಓಂಪ್ರಕಾಶ್ ನಿರ್ದೇಶನದ 49ನೇ ಚಿತ್ರವಾಗಲಿದೆ.