ಮೂರು ವರ್ಷಗಳ ಹಿಂದೆ, ನಟ-ನಿರ್ದೇಶಕ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ನಟಿ ಶ್ರುತಿ ಹರಿಹರನ್ಗೆ ಇದೀಗ ಸಿಆರ್ಪಿಸಿ ನಿಯಮಾನುಸಾರ ಸೆಕ್ಷನ್ 159ರ ಅಡಿ ಮತ್ತೆ ನೋಟಿಸ್ ನೀಡಲಾಗಿದೆ.
''Me Too'' ಈ ಶಬ್ದ ದೇಶವನ್ನೇ ನಿಬ್ಬೆರಗಾಗಿಸಿತ್ತು. ಸಿನಿರಂಗದ ಟಾಪ್ ನಟಿಯರು ನನಗೂ ಮೀ ಟೂ ಅನುಭವವಾಗಿದೆ, ಲೈಂಗಿಕ ದೌರ್ಜನ್ಯವಾಗಿದೆ ಎಂಬ ಮಾತುಗಳನ್ನಾಡಿದ್ದರು. ಆ ವೇಳೆ ದಕ್ಷಿಣ ಭಾರತ ಸಿನಿರಂಗದ ಸ್ಟಾರ್ ಅರ್ಜುನ್ ಸರ್ಜಾ ಮೇಲೂ ನಟಿ ಶೃತಿ ಹರಿಹರನ್ Me too ಆರೋಪವನ್ನು ಮಾಡಿದ್ದರು.
ಪ್ರಕರಣ: ವಿಸ್ಮಯ ಸಿನಿಮಾ ಚಿತ್ರೀಕರಣ ವೇಳೆ ಅರ್ಜುನ್ ಸರ್ಜಾ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು 2018ರಲ್ಲಿ ಶೃತಿ ಹರಿಹರನ್ ಆರೋಪ ಹೊರಿಸಿದ್ದರು. ಕಬ್ಬನ್ ಪಾರ್ಕ್ ಪೊಲೀಸರು ತನಿಖೆ ಕೈಗೊಂಡು ವಿಸ್ಮಯ ಚಿತ್ರದ ನಿರ್ದೇಶಕ, ನಿರ್ಮಾಪಕ, ಛಾಯಾಗ್ರಾಹಕರ ಹೇಳಿಕೆ ಪಡೆದಿದ್ದರು. ಶೃತಿ ಹರಿಹರನ್ ಆರೋಪದಂತೆ ಯುಬಿ ಸಿಟಿ ಹಾಗೂ ದೇವನಹಳ್ಳಿಯಲ್ಲೂ ಪರಿಶೀಲನೆ ನಡೆಸಿದ್ದರು.
ಶೃತಿ ಹರಿಹರನ್ಗೆ ನೋಟಿಸ್: ಆದರೂ ಅರ್ಜುನ್ ಮೇಲಿನ ಆರೋಪಕ್ಕೆ ಪೂರಕ ಸಾಕ್ಷ್ಯ ಸಿಕ್ಕಿರಲಿಲ್ಲ. ಸಾಕ್ಷ್ಯ ಒದಗಿಸುವಲ್ಲಿ ಶೃತಿ ಹರಿಹರನ್ ಕೂಡ ವಿಫಲವಾಗಿದ್ದರು. ಈ ಕೇಸ್ ದಾಖಲಾದ ಮೂರು ವರ್ಷದ ಬಳಿಕ ಶೃತಿ ಹರಿಹರನ್ಗೆ ಸಿಆರ್ಪಿಸಿ ನಿಯಮಾನುಸಾರ 159ರ ಅಡಿ ಮತ್ತೆ ನೋಟಿಸ್ ನೀಡಲಾಗಿದೆ.
ಶೃತಿ ಹರಿಹರನ್ ವಿಸ್ಮಯ ಚಿತ್ರೀಕರಣ ವೇಳೆ ಅರ್ಜುನ್ ಸರ್ಜಾ ಲೈಂಗಿಕ ದೌರ್ಜನ್ಯ ಎಸಗಿದ್ದರೆನ್ನುವ ಆರೋಪಕ್ಕೆ ಸಾಕ್ಷ್ಯವೇ ಸಿಗಲಿಲ್ಲ. ತನ್ನ ಮೇಲಿನ ಅರೋಪಕ್ಕೆ ಅರ್ಜುನ್ ಸರ್ಜಾ ಕೂಡ ಹೇಳಿಕೆ ದಾಖಲಿಸಿ ತನ್ನ ಮೇಲಿನ ಆರೋಪದಲ್ಲಿ ಹುರುಳಿಲ್ಲ ಎಂದಿದ್ದರು. ಇದೀಗ ತನಿಖೆಯನ್ನು ಪೂರ್ಣಗೊಳಿಸಿರುವ ಕಬ್ಬನ್ ಪಾರ್ಕ್ ಪೊಲೀಸರು ಸಾಕ್ಷ್ಯಾಧಾರದ ಕೊರತೆ ಹಿನ್ನೆಲೆಯಲ್ಲಿ ಬಿ ರಿಪೋರ್ಟ್ ಹಾಕಲು ಮುಂದಾಗಿದ್ದಾರೆ. ಬಿ ರಿಪೋರ್ಟ್ಗೂ ಮುನ್ನ ಶೃತಿ ಹರಿಹರನ್ಗೆ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ: ಈ ಸಿನಿಮಾವನ್ನು ನಾನೇ ಕನ್ನಡದಲ್ಲಿ ನಿರ್ದೇಶನ ಮಾಡಲು ತೀರ್ಮಾನಿಸಿದ್ದೆ ; ನಟ ಸುದೀಪ್
ಸದ್ಯ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣದ ಬಿ ರಿಪೋರ್ಟ್ ಮಾಡುತ್ತಿರುವುದರಿಂದ ಅರ್ಜುನ್ ಸರ್ಜಾ ಮೇಲಿನ ಆರೋಪಕ್ಕೆ ಮುಕ್ತಿ ಸಿಕ್ಕಂತಾಗುತ್ತದೆ.