ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಮಿಂಚಿದ್ದ ನಟಿ ನಿಕಿತಾ ತುಕ್ರಾಲ್ಗೆ ಹುಟ್ಟುಹಬ್ಬದ ಸಂಭ್ರಮ. ಪಂಜಾಬ್ ಮೂಲದ ನಿಕಿತಾ ತುಕ್ರಾಲ್ ಇಂದು 39ನೇ ಜನ್ಮದಿನ ಆಚರಿಸುತ್ತಿದ್ದಾರೆ.
ನಿಕಿತಾ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಡಿಕೆಯ ನಟಿಯಾಗಿ ಮಿಂಚಿದವರು. ನಿಕಿತಾ ಬೆಳೆದದ್ದು ಮುಂಬೈನಲ್ಲಿ. ಆತಿ ರಹೇಗಿ ಬಹರಿನ್ ಟಿವಿ ಸರಣಿಯಿಂದ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಟ ಕಿಚ್ಚ ಸುದೀಪ್ ಅಭಿನಯದ ಮಹಾರಾಜ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿಕಿತಾ ತುಕ್ರಾಲ್ಗೆ ನಟ ಪುನೀತ್ ರಾಜ್‍ಕುಮಾರ್ ಜೊತೆಗಿನ ವಂಶಿ ಸಿನಿಮಾ ದೊಡ್ಡ ಸಕ್ಸಸ್ ತಂದು ಕೊಟ್ಟಿತ್ತು.
ಅಲ್ಲಿಂದ ದುಬೈ ಬಾಬು, ಯೋಧ, ಪ್ರಿನ್ಸ್, ಸ್ನೇಹಿತರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಮುಕುಂದ ಮುರಾರಿ, ನೀ ಟಾಟಾ ನಾ ಬಿರ್ಲಾ ಸೇರಿ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಿಕಿತಾ ಅಭಿನಯಿಸಿ ಕನ್ನಡಿಗರ ಪ್ರೀತಿಗಳಿಸಿದರು.
ಸುದೀಪ್, ಪುನೀತ್ ರಾಜ್ ಕುಮಾರ್, ದರ್ಶನ್, ಉಪೇಂದ್ರ ಸೇರಿದಂತೆ ಕನ್ನಡದ ಸ್ಟಾರ್ ನಟರ ಜೊತೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಹೀಗೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೇಡಿಕೆ ಹೊಂದಿದ್ದ, ನಿಕಿತಾ 2017ರಲ್ಲಿ ಮುಂಬೈ ಮೂಲದ ಉದ್ಯಮಿ ಗಗನ್ ದೀಪ್ ಮಹೇಂದರ್ ಜೊತೆ ಮದುವೆ ಆದರು. ಬಳಿಕ ಸಿನಿಮಾದಿಂದ ದೂರ ಸರಿದಿದ್ದು, ಮುದ್ದಾದ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ.