ನಿಖಿಲ್ ಕುಮಾರಸ್ವಾಮಿ 'ಜಾಗ್ವಾರ್' ಚಿತ್ರದಿಂದ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟವರು. ಸಾಹಸ, ಸೆಂಟಿಮೆಂಟ್ ಎಲ್ಲಾ ರೀತಿಯ ಆ್ಯಕ್ಟಿಂಗ್ನಲ್ಲೂ ನಿಖಿಲ್ ಕನ್ನಡಿಗರಿಗೆ ಇಷ್ಟವಾದರು. ಅದರಲ್ಲೂ ಕಳೆದ ವರ್ಷ ಬಿಡುಗಡೆಯಾದ 'ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ನಟಿಸಿದ ನಂತರವಂತೂ ನಿಖಿಲ್ಗೆ ಅಭಿಮಾನಿಗಳು ಹೆಚ್ಚಾದರು.
ಫೆಬ್ರವರಿ 10 ರಂದು ರೇವತಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ನಿಖಿಲ್ ಕುಮಾರಸ್ವಾಮಿ ಮೊದಲೇ ನಿಗದಿಪಡಿಸಿದ ಏಪ್ರಿಲ್ 17 ರಂದು ಸರಳವಾಗಿ ಮದುವೆಯಾಗುತ್ತಿದ್ದಾರೆ. ಕಳೆದ ವರ್ಷ ಜನವರಿ 25 ರಂದು ಹರ್ಷ ನಿರ್ದೇಶಿಸಿದ್ದ 'ಸೀತಾರಾಮ ಕಲ್ಯಾಣ' ಬಿಡುಗಡೆಯಾಗಿತ್ತು. ಆ ಚಿತ್ರದಲ್ಲಿ ರಚಿತಾ ರಾಮ್ ಅವರನ್ನು ವರಿಸಿದ್ದ ನಿಖಿಲ್ ಕುಮಾರಸ್ವಾಮಿ ಈ ವರ್ಷ ನಿಜ ಜೀವನದಲ್ಲಿ ರೇವತಿ ಅವರನ್ನು ಕೈ ಹಿಡಿಯುತ್ತಿದ್ದಾರೆ. ಬೆಂಗಳೂರು ಮೈಸೂರು ರಸ್ತೆಯಲ್ಲಿ ಅದ್ದೂರಿ ಸೆಟ್ ಹಾಕಿ ವಿಜೃಂಭಣೆಯಿಂದ ನಿಖಿಲ್ ರೇವತಿ ಮದುವೆ ಮಾಡಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಭೀತಿಯಿಂದ ಮದುವೆ ಸರಳವಾಗಿ ಜರುಗಲಿದೆ.
ಏಪ್ರಿಲ್ 17 ರಂದು ರೇವತಿ ಅವರ ನಿವಾಸದಲ್ಲೇ ಈ ಮದುವೆ ಜರುಗಲಿದ್ದು ನಿಖಿಲ್ ಕುಟುಂಬದಿಂದ 20 ಮಂದಿ ಹಾಗೂ ರೇವತಿ ಕುಟುಂಬದಿಂದ 20 ಮಂದಿ ಮಾತ್ರ ಈ ಮದುವೆಯಲ್ಲಿ ಭಾಗವಹಿಸಬೇಕು ಎಂದು ನಿರ್ಧರಿಸಲಾಗಿದೆ. ರೇವತಿ ಅವರು ಶಾಸಕ ಹಾಗೂ ಮಾಜಿ ಮಂತ್ರಿ ಕೃಷ್ಣಪ್ಪ ಅವರ ಹತ್ತಿರದ ಸಂಬಂಧಿ ಶ್ರೀ ಮಂಜುನಾಥ್ ಹಾಗೂ ಶ್ರೀದೇವಿ ಅವರ ಪುತ್ರಿ. ಜ್ಯುವೆಲರಿ ಡಿಸೈನ್ನಲ್ಲಿ ರೇವತಿ ಡಿಪ್ಲೊಮಾ ವ್ಯಾಸಂಗ ಮಾಡಿದ್ದಾರೆ.