ವಿಭಿನ್ನ ಕಥೆಗಳ ಮೂಲಕ ವೀಕ್ಷಕರ ಮನ ಗೆದ್ದಿರುವ ಉದಯ ವಾಹಿನಿಯ ಧಾರಾವಾಹಿಗಳ ಸಾಲಿಗೆ ವಿನೂತನ ಸೇರ್ಪಡೆ ʻನಯನತಾರಾʼ. ಉದಯ ವಾಹಿನಿ ಮತ್ತೆ ಹೊಸ ಧಾರಾವಾಹಿ ವೀಕ್ಷಕರಿಗೆ ನೀಡಲಿದೆ. ತನ್ನ ಪ್ರಾಮಾಣಿಕತೆ, ನಿಷ್ಠೆ, ಸತ್ಯಸಂಧತೆ, ಮುಗ್ಧತೆಯ ಮೂಲಕ ಮನ ಗೆಲ್ಲುವ ಸರಳ ಹುಡುಗಿ ನಯನಾ ಮತ್ತು ಅತಿಯಾಸೆ, ಭ್ರಮೆ, ಸುಳ್ಳು, ವಿಶ್ವಾಸದ್ರೋಹದ ಮೂಲಕ ಬದುಕಲ್ಲಿ ಸೋಲುವ ತಾರಾ ಈ ಇಬ್ಬರು ಅಕ್ಕತಂಗಿಯರ ಕಥೆ ʻನಯನತಾರಾʼ.
ಮನೆಗೆಲಸ ಮಾಡಿಕೊಂಡು ತಂಗಿ ತಾರಾಳನ್ನು ಓದಿಸುವ, ಅವಳ ಮದುವೆ ಮಾಡಿ ದಡ ಸೇರಿಸಲು ಪ್ರಯತ್ನಿಸುವ ನಯನಾ, ಎಂದೂ ತನ್ನ ಜೀವನದ ಬಗ್ಗೆ ಯೋಚಿಸುವವಳಲ್ಲ. ಆದರೆ ಈ ಸತ್ಯ, ಪ್ರಾಮಾಣಿಕತೆಯ ದಾರಿ ಸುಲಭವಲ್ಲ. ಕಲ್ಲು, ಮುಳ್ಳುಗಳು, ಅಡೆತಡೆಗಳನ್ನು ದಾಟಿ ಮುನ್ನಡೆಯಬೇಕಾಗುತ್ತದೆ. ಇದೇ ʻನಯನತಾರಾʼ ಪರಿಕಲ್ಪನೆಯ ಹಿಂದಿರುವುದು.
ಚಲನಚಿತ್ರ ನಿರ್ಮಾಪಕರಾದ ಜಯಣ್ಣ ಅವರು ತಮ್ಮ ಜಯಣ್ಣ ಕಂಬೈನ್ಸ್ ಮೂಲಕ ʻನಯನತಾರಾʼ ಧಾರಾವಾಹಿ ನಿರ್ಮಿಸುತ್ತಿದ್ದಾರೆ. ಈ ಮೂಲಕ ಮೊಟ್ಟ ಮೊದಲ ಸಲ ಕಿರುತೆರೆ ನಿರ್ಮಾಣಕ್ಕೆ ಕಾಲಿಡುತ್ತಿದ್ದಾರೆ.
ʻಚಿತ್ರ ನಿರ್ಮಾಣ ಒಂದು ಸಲಕ್ಕೆ ಮುಗಿದು ಹೋಗುವ ಪ್ರಕ್ರಿಯೆ. ಧಾರಾವಾಹಿ ನಿರ್ಮಾಣವೆಂದರೆ ದಿನವೂ ಮದುವೆ ಮಾಡಿದಂತೆ. ಇದು ಒಂದು ರೀತಿಯ ಸವಾಲಿನ ಕೆಲಸ. ಕನ್ನಡ ಕಿರುತೆರೆಗೆ ಉದಯ ಟಿವಿ ಮೂಲಕ ಕಾಲಿಡುತ್ತಿರುವುದು ಹೆಮ್ಮೆಯ ವಿಷಯ. ಉದಯ ಟಿವಿ ಯಾವತ್ತೂ ಚಿತ್ರ ನಿರ್ಮಾಪಕರನ್ನು ಬೆಂಬಲಿಸುತ್ತಾ ಬಂದಿದೆ. ನಿರೀಕ್ಷೆಗೆ ತಕ್ಕಹಾಗೆ ಈ ಧಾರಾವಾಹಿಯನ್ನು ಸಿನಿಮಾ ಗುಣಮಟ್ಟದಲ್ಲೇ ಪ್ರೇಕ್ಷಕರಿಗೆ ತೋರಿಸುವುದು ನಮ್ಮ ಆಶಯʼ ಎನ್ನುತ್ತಾರೆ ನಿರ್ಮಾಪಕ ಜಯಣ್ಣ.
ಕಿರುತೆರೆಯ ತಿಲಕ್ ʻನಯನತಾರಾʼ ಧಾರಾವಾಹಿ ನಿರ್ದೇಶಿಸುತ್ತಿದ್ದಾರೆ. ಚೈತ್ರಾ, ಅಶ್ವಿನಿ, ಧನುಷ್, ಸಂಧ್ಯಾ ವೆಂಕಟೇಶ್, ಮಹಾದೇವ, ಸೂರಜ್ ಅಭಿನಯಿಸಿದ್ದಾರೆ. ʻನಯನತಾರಾʼ ಇದೇ ಫೆಬ್ರವರಿ 8ರಿಂದ ಪ್ರತಿ ಸೋಮವಾರದಿಂದ ಶನಿವಾರ ರಾತ್ರಿ 9.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.